ನವದೆಹಲಿ : ಒಬ್ಬ ಕ್ರೀಡಾಪಟುವಿಗೆ ತನ್ನ ವೃತ್ತಿ ಜೀವನದಲ್ಲಿ ಸೋಲು ಅನ್ನೋದು ಸಾಮಾನ್ಯ. ಹಾಗೆಯೇ ಕೆಲವರಿಗೆ ಅಪರೂಪ. ಟೋಕಿಯೋ ಒಲಿಂಪಿಕ್ಸ್ನಲ್ಲಿ ನಡೆದ ಬಾಕ್ಸಿಂಗ್ನಲ್ಲಿ ಭಾರತೀಯ ಬಾಕ್ಸರ್ ಸತೀಶ್ ಕುಮಾರ್, ವಿಶ್ವ ಚಾಂಪಿಯನ್ ವಿರುದ್ಧ ತಿಂದಿರುವ ಹೊಡೆತಗಳಿಗೆ ಮುಖಕ್ಕೆ 13 ಹೊಲಿಗೆಗಳನ್ನು ಹಾಕಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ನಾನು ಸೋತರೂ, ಜನ ನನ್ನನ್ನು ಗೆದ್ದಂತೆ ಅಭಿನಂದಿಸುತ್ತಿದ್ದಾರೆ. ನನ್ನ ಮುಖಕ್ಕೆ ತುಂಬಾ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಭಾರತದ ಹೆಮ್ಮೆಯ ಸೈನಿಕ ಹಾಗೂ ಬಾಕ್ಸರ್ ಸತೀಶ್ ಕುಮಾರ್ (32) ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸತೀಶ್ ಹಣೆ ಮತ್ತು ಗಲ್ಲಕ್ಕೆ ತೀವ್ರ ಪೆಟ್ಟು ಬಿದ್ದಿತು. ಆದರೂ, ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ಧ ಸೆಣಸಾಡಿದರು. ನನ್ನ ಗಲ್ಲಕ್ಕೆ ಏಳು ಹೊಲಿಗೆ, ಹಣೆಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ. ಸಾಧ್ಯವಾದಷ್ಟು ನಾನು ಅತ್ಯುತ್ತಮವಾಗಿ ಆಡಿದ್ದೇನೆ.
ನನಗೆ ಇಬ್ಬರು ಮಕ್ಕಳಿದ್ದು, ನನ್ನ ಹೆಂಡತಿ ಈ ಬಾಕ್ಸಿಂಗ್‌ಗೆ ಹೋಗುವುದು ಬೇಡ ಎಂದು ಹೇಳಿದ್ದಳು. ನನ್ನ ತಂದೆ ಕೂಡ ಈ ಆಟದಿಂದ ನೋವು ಜಾಸ್ತಿ ಹೋಗಬೇಡ ಎಂದಿದ್ದರು. ಆದರೂ, ನಾನು ಟೋಕಿಯೋ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದೆ ಎಂದರು.
ಇದನ್ನೂ ಓದಿ: ಬಿಲ್ಲುಗಾರಿಕೆಯಲ್ಲಿ ಭಾರತೀಯರು ಎಡವಿದ್ದೆಲ್ಲಿ?.. ಮಾಜಿ ಆಟಗಾರರು ಹೇಳಿದ್ದಿಷ್ಟು..
ಮಕ್ಕಳು ಪಂದ್ಯ ವೀಕ್ಷಿಸುತ್ತಾರೆಯೇ?
ನನಗೆ ಒಬ್ಬ ಮಗಳು, ಒಬ್ಬ ಮಗನಿದ್ದು, ಇಬ್ಬರೂ ಪಂದ್ಯ ನೋಡುತ್ತಾರೆ ಎಂದು ಹೇಳಿದ್ದಾರೆ. ಸತೀಶ್ ಕುಮಾರ್, ಏಷ್ಯನ್ ಗೇಮ್ಸ್ನಲ್ಲಿ ಎರಡು ಬಾರಿ ಕಂಚಿನ ಪದಕ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ, ಸಾಕಷ್ಟು ಬಾರಿ ರಾಷ್ಟ್ರೀಯ ಚಾಂಪಿಯನ್ ಮತ್ತು ಭಾರತದಿಂದ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊದಲ ಸೂಪರ್ ಹೆವಿವೇಯ್ಟ್ ಆಗಿದ್ದಾರೆ.
ಸೇನೆಯ ತರಬೇತುದಾರರ ಒತ್ತಾಯದ ಮೇರೆಗೆ ಕಬಡ್ಡಿ ಮಾಜಿ ಆಟಗಾರ ಬಾಕ್ಸಿಂಗ್‌ಗೆ ಪ್ರವೇಶಿಸಿದರು. ಇನ್ನು ಮುಂದೆ ಬರುವ ಯಾವುದೇ ಅವಕಾಶಗಳನ್ನು ನಾನು ಮಿಸ್ ಮಾಡಿಕೊಳ್ಳಲ್ಲ ಎಂದರು.