ಟೋಕಿಯೋ(ಜಪಾನ್): ಆಗಸ್ಟ್ 24ರಿಂದ ಆರಂಭಗೊಂಡಿದ್ದ 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ ಇಂದು ಮುಕ್ತಾಯಗೊಳ್ಳಲಿದ್ದು, ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಭಾರತದ ಕೆಲ ಅಥ್ಲೀಟ್ಸ್ಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದು, ದೇಶಕ್ಕೆ ಮತ್ತಷ್ಟು ಪದಕ ಗೆದ್ದು ತರುವ ಸಾಧ್ಯತೆ ಇದೆ.
ಇಲ್ಲಿಯವರೆಗಿನ ಸ್ಪರ್ಧೆಯಲ್ಲಿ 4 ಚಿನ್ನದ ಪದಕ, 7 ಬೆಳ್ಳಿ ಹಾಗೂ 6 ರಂಜತ ಪದಕದೊಂದಿಗೆ ಒಟ್ಟು 17 ಪದಕ ಗೆದ್ದಿರುವ ಭಾರತ 26ನೇ ಸ್ಥಾನದೊಂದಿಗೆ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಪ್ರಮುಖವಾಗಿ 19 ವರ್ಷದ ಅವನಿ ಲೇಖರಾ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು, ಇದೀಗ ಅವರಿಗೆ ಮತ್ತೊಂದು ಗೌರವ ಒಲಿದು ಬಂದಿದೆ.
ಭಾರತದ ಧ್ವಜಧಾರಿಯಾಗಿ ಅವನಿ
ಇಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 19 ವರ್ಷದ ಪ್ಯಾರಾ ಶೂಟರ್ ಅವನಿ ಲೇಖರಾ ಭಾರತದ ಧ್ವಜಧಾರಿಯಾಗಲಿದ್ದು, ಇವರೊಂದಿಗೆ ಭಾರತದ ಇತರೆ 11 ಸದಸ್ಯರು ಭಾಗಿಯಾಗಲಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಅವನಿ, 50 ಮೀಟರ್ ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದಾರೆ.