ಹೈದರಾಬಾದ್: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ 41 ವರ್ಷಗಳ ನಂತರ ಭಾರತದ ರಾಷ್ಟ್ರೀಯ ಕ್ರೀಡೆಗೆ ಒಲಿಂಪಿಕ್ಸ್ನಲ್ಲಿ ಪದಕವೊಂದು ಸಿಕ್ಕಿದೆ. ತಂಡದ ಉತ್ತಮ ಪ್ರದರ್ಶನದಿಂದಾಗಿ ಈ ಪ್ರತಿಫಲ ಸಿಕ್ಕಿದ್ದು, ಈಗಾಗಲೇ ಆಯಾ ರಾಜ್ಯಗಳು ಹಾಕಿ ಪ್ಲೇಯರ್ಸ್ಗಳಿಗೆ ನಗದು ಬಹುಮಾನ ಘೋಷಣೆ ಮಾಡಿವೆ.
ಟೋಕಿಯೋ ಒಲಿಂಪಿಕ್ಸ್ನ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ಸೋತು ಉಳಿದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಎರಡನೇ ತಂಡವಾಗಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿತ್ತು. ಇದಾದ ಬಳಿಕ ನಡೆದ ಪಂದ್ಯದಲ್ಲಿ ಅರ್ಜಿಂಟೀನಾ ವಿರುದ್ಧ ಗೆದ್ದು ಸೆಮೀಸ್ಗೆ ದಾಪುಗಾಲು ಹಾಕಿತು. ಆದರೆ ಬೆಲ್ಜಿಯಂ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿತ್ತು. ಲೀಗ್ ಹಂತದಲ್ಲಿ ಎದುರಾಳಿ ತಂಡದ ಅನೇಕ ಗೋಲು ತಡೆಯುವಲ್ಲಿ ಭಾರತದ ಗೋಲ್ ಕೀಪರ್ ಶ್ರೀಜೇಶ್ ಯಶಸ್ವಿಯಾಗಿದ್ದರು.
ಇದೀಗ ದುಬೈ ಮೂಲದ ಉದ್ಯಮಿ ಡಾ. ಶಂಶೀರ್ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ಗೆ 1 ಕೋಟಿ ರೂ. ನಗದು ನೀಡುವುದಾಗಿ ಘೋಷಣೆ ಮಾಡಿದ್ದಾರೆ. VPS ಹೆಲ್ತ್ಕೇರ್ನ ಡೈರೆಕ್ಟರ್ ಆಗಿರುವ ಶಂಶೀರ್, ಗೋಲ್ ಕೀಪರ್ ಆಟಕ್ಕೆ ಮನಸೋತು ಈ ನಿರ್ಧಾರ ಕೈಗೊಂಡಿದ್ದಾರೆ. ಟೀಂ ಇಂಡಿಯಾ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಪಾತ್ರ ಮಹತ್ವದಾಗಿದ್ದು, ಎದುರಾಳಿ ಭಾರಿಸಿರುವ ಅನೇಕ ಗೋಲು ತಡೆದು ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.
ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲೂ ಗೋಲ್ ಕೀಪರ್ ಶ್ರೀಜೇಶ್ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಎದುರಾಳಿ ತಂಡ 13 ಪೆನಾಲ್ಟಿ ಪಡೆದುಕೊಂಡಿದ್ದ ಸಂದರ್ಭದಲ್ಲಿ ಅವುಗಳನ್ನ ಯಶಸ್ವಿಯಾಗಿ ತಡೆದಿದ್ದರು. ಇದರ ಪರಿಣಾಮವಾಗಿ ತಂಡ 5-4 ಅಂತರದಿಂದ ಗೆಲುವು ದಾಖಲು ಮಾಡಿತ್ತು.
ಇದನ್ನೂ ಓದಿರಿ: 'ಅರಿಗಾಟೋ' ಟೋಕಿಯೋ! ಒಗ್ಗಟ್ಟಿನ ಸಂದೇಶದೊಂದಿಗೆ ಒಲಿಂಪಿಕ್ಸ್‌ಗೆ ವೈಭವದ ತೆರೆ
ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದ ಭಾರತದ ಪುರುಷರ ತಂಡ ಕಂಚಿಗಾಗಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಗೆಲುವು ದಾಖಲು ಮಾಡುವಂತಾಯಿತು. ಈಗಾಗಲೇ ಹರಿಯಾಣ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳು ಬಹುಮಾನ ಘೋಷಣೆ ಮಾಡಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಕೂಡ 1ಕೋಟಿ 25 ಲಕ್ಷ ರೂ.ನಗದು ಬಹುಮಾನ ನೀಡಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಂದು ಚಿನ್ನದ ಪದಕ ಹಾಗೂ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಬಂದಿದ್ದು, ಎಲ್ಲ ಪ್ಲೇಯರ್ಸ್ಗಳಿಗೆ ಈಗಾಗಲೇ ಬಹುಮಾನ ಘೋಷಣೆಯಾಗಿವೆ.