ಟೋಕಿಯೋ: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ಗೆ ಇಂದಿನಿಂದ ಚಾಲನೆ ಸಿಕ್ಕಿದ್ದು, ಆಗಸ್ಟ್ 8ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 11,091 ಅಥ್ಲಿಟ್ಸ್ 41 ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಕೂಟದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ದೇಶಗಳು ತಮ್ಮ ದೇಶದ ಧ್ವಜ ಹಿಡಿದು ಸಮಾರಂಭದಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನ ಕೂಡ ಇದರಲ್ಲಿ ಭಾಗಿಯಾಗಿದ್ದು, ಮೊದಲ ದಿನವೇ ಕೋವಿಡ್ ನಿಯಮ ಉಲ್ಲಂಘಿಸಿದ್ದು ಕಂಡುಬಂತು.
ಸಮಾರಂಭದಲ್ಲಿ ಭಾಗಿಯಾಗುವ ಎಲ್ಲ ಆಟಗಾರರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ಪಾಕ್ ಆಟಗಾರರು ಈ ನಿಯಮ ಗಾಳಿಗೆ ತೂರಿದರು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ನಾಳೆ ಭಾರತದ ಸ್ಪರ್ಧಿಗಳಿಗೆ ಎದುರಾಗುವ ಸವಾಲೇನು? ಇಲ್ಲಿದೆ ಮಾಹಿತಿ..
ಪಾಕಿಸ್ತಾನದ ಧ್ವಜ ಹಿಡಿದು ಸಮಾರಂಭದಲ್ಲಿ ಭಾಗಿಯಾಗಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಮೊಹರ್ ಶಹ್ಜಾದ್ ಹಾಗೂ ಶೂಟರ್ ಖಲೀಲ್ ಅಖ್ತರ್ ಮಾಸ್ಕ್ ಹಾಕಿಕೊಳ್ಳದೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಸಮಾರಂಭದಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ ತಂಡದ ಸದಸ್ಯರು ಕೂಡ ಮಾಸ್ಕ್ ಹಾಕಿಕೊಳ್ಳದೇ ಕಾಣಿಸಿಕೊಂಡಿದ್ದಾರೆ.
ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕ್ರೀಡಾಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸುವಂತೆ ಎಲ್ಲ ಅಥ್ಲೀಟ್ಸ್ಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಎಲ್ಲ ಸಮಯದಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ 120 ಕ್ರೀಡಾಪಟುಗಳು ಭಾಗಿಯಾಗಿದ್ದು, ಬಾಕ್ಸರ್ ಮೇರಿ ಕೋಮ್ ಹಾಗೂ ಮನ್ಪ್ರೀತ್ ಸಿಂಗ್ ತ್ರಿವರ್ಣ ಧ್ವಜ ಹಿಡಿದು ಸಮಾರಂಭದಲ್ಲಿ ಭಾಗಿಯಾಗಿದ್ದರು.