ಟೋಕಿಯೋ: ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಟೋಕಿಯೋ ಒಲಿಂಪಿಕ್ಸ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದರು. ಆದರೆ ಚೀನಾ ಆಟಗಾರನ ವಿರುದ್ಧದ ಪಂದ್ಯದಲ್ಲಿ ವಿರೋಚಿತ ಸೋಲು ಕಾಣುವ ಮೂಲಕ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಇದೇ ವಿಚಾರವಾಗಿ ಈಟಿವಿ ಭಾರತ ಜೊತೆ ಅವರು ತಮ್ಮ ಮನದಾಳ ಹಂಚಿಕೊಂಡರು.
![Sharath Kamal](https://etvbharatimages.akamaized.net/etvbharat/prod-images/12610112_twfw.jpg)
ಚೀನಾದ ಅಥ್ಲೀಟ್ಸ್ L. Ma ವಿರುದ್ಧದ ಪಂದ್ಯದಲ್ಲಿ ಶರತ್ ಕಮಲ್ 4-1 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದರು. ಆದ್ರೆ ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದ ಬಗ್ಗೆ ಮಾತನಾಡಿರುವ ಅವರು, ಇದುವರೆಗೆ ಭಾಗವಹಿಸಿರುವ ಅತ್ಯುತ್ತಮ ಪಂದ್ಯಗಳಲ್ಲಿ ಇದು ಕೂಡ ಒಂದು ಎಂದಿದ್ದಾರೆ.
ಈಟಿವಿ ಭಾರತ ಜೊತೆಗಿನ ಸಂದರ್ಶನದ ಆಯ್ದ ಭಾಗ
1. ನೀವು L.Ma ಅವರನ್ನು ಹೇಗೆ ಎದುರಿಸಿದ್ದೀರಿ?
ಪಂದ್ಯಾವಳಿ ಆರಂಭವಾಗುವುದಕ್ಕೂ ಮೊದಲೇ ಈ ಪಂದ್ಯ ಡ್ರಾ ಆಗಲಿದೆ ಎಂದು ನನಗೆ ತಿಳಿದಿತ್ತು. ಆದರೆ ಕಳೆದ 15 ವರ್ಷಗಳಲ್ಲಿ ನಾನು ಇವರನ್ನು ಸೋಲಿಸಿರಲಿಲ್ಲ. ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಚೀನಾದ L.Ma ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ನಾನು ಮೂರನೇ ಸೆಟ್ ಗೆದ್ದಿದ್ದರೆ ಖಂಡಿತವಾಗಿ ಅವರ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿತ್ತು. ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಆದಷ್ಟು ಒತ್ತಡ ಹೇರಿದ್ರೂ ಕೂಡ ಸೋಲು ಕಾಣುವಂತಾಯಿತು. ಆದರೆ ಈ ಪಂದ್ಯದಲ್ಲಿನ ಪ್ರದರ್ಶನದಿಂದ ನನಗೆ ಸಂತೋಷವಿದೆ.
2. ಕೊನೆಯ ಸೆಟ್ಗಳಿಂದ ಪಂದ್ಯ ನಿರ್ಧರಿಸಲು ಸಾಧ್ಯವೇ?
ಹೌದು, ಕೊನೆಯ ಕೆಲವೊಂದು ಸೆಟ್ಗಳು ಇಡೀ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಮೂರು ಸೆಟ್ಗಳ ಪೈಕಿ ಕೊನೆಯದಾಗಿ ಗಳಿಸುವ ಕೆಲವೊಂದು ಅಂಕಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ.
3. ಮಿಶ್ರ ಡಬಲ್ಸ್ ಬಗ್ಗೆ ನಿಮ್ಮ ಅಭಿಪ್ರಾಯ?
ಮಿಶ್ರ ಡಬಲ್ಸ್ನಲ್ಲಿ ನಾವು ಪದಕ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೆವು. ಒಂದು ವೇಳೆ ಪದಕ ಗೆಲ್ಲಲು ಸಾಧ್ಯವಾಗದಿದ್ದರೆ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕುವ ಇರಾದೆ ಇತ್ತು. ಆದರೆ ಮಿಶ್ರ ಡಬಲ್ಸ್ ಹಾಗೂ ಸಿಂಗಲ್ಸ್ನಲ್ಲಿ ಸಾಕಷ್ಟು ನಿರಾಸೆ ಅನುಭವಿಸುವಂತಾಯಿತು ಎಂದರು.
![Sharath Kamal](https://etvbharatimages.akamaized.net/etvbharat/prod-images/12610112_twdfdfdfd.jpg)
4. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತೀರಾ?
ಈ ಆಯ್ಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ ಇಷ್ಟು ಬೇಗ ನಿವೃತ್ತಿ ಪಡೆದುಕೊಳ್ಳಬೇಕು ಎಂಬ ಬಯಕೆ ನನ್ನಲ್ಲಿ ಇಲ್ಲ. ನಾನು ಕಾಮನ್ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೇನೆ.
ಇದನ್ನೂ ಓದಿ: ಲಿವಿಂಗ್ ಟುಗೆದರ್‌ನಲ್ಲಿದ್ದ ಯುವತಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಟೆಕ್ಕಿ!