ಟೋಕಿಯೊ (ಜಪಾನ್): ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರ ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಬ್ರಿಟನ್ ಪರ ಸ್ಯಾಮುಯೆಲ್ ಇಯಾನ್ ಏಕೈಕ ಗೋಲು ಗಳಿಸಿದರು. ಪಂದ್ಯದುದ್ದಕ್ಕೂ ಬ್ರಿಟನ್ ವಿರುದ್ಧ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಕೊನೆಗೂ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಇದಕ್ಕೂ ಮೊದಲು 49 ವರ್ಷದ ಹಿಂದೆ 1972ರಲ್ಲಿ ಮ್ಯೂನಿಚ್ನಲ್ಲಿ ನಡೆದಿದ್ದ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 2-0 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಇದಾದ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೆ, 41 ವರ್ಷದ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಕೇವಲ 6 ತಂಡಗಳಿದ್ದ ಕಾರಣ ಸೆಮಿಫೈನಲ್ ಹಂತ ಇಲ್ಲದೆಯೇ ಫೈನಲ್ ಪ್ರವೇಶಿಸಿತ್ತು ಜೊತೆಗೆ ಅಂದು ಚಿನ್ನಕ್ಕೆ ಕೊರೊಳೊಡ್ಡಿತ್ತು.
ಇದೀಗ ಮತ್ತೆ 49 ವರ್ಷದ ನಂತರ ಸೆಮಿಫೈನಲ್ ಪ್ರವೇಶಿಸಿದ್ದು, ಮತ್ತೆ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ. ಆಗಸ್ಟ್ 3ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ ಮೈದಾನಕ್ಕಿಳಿದರೆ, ಇನ್ನೊಂದು ಗುಂಪಿನಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳು ಫೈನಲ್ ಪ್ರವೇಶಿಸಲು ಕಾದಾಡಲಿವೆ.