ಟೋಕಿಯೋ: ಒಲಿಂಪಿಕ್ಸ್ನಲ್ಲಿ ಭಾರತವು ಇಂದು 14 ದಿನದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಇಂದು ಚಿನ್ನದ ಪದಕ ಭರವಸೆ ಮೂಡಿಸಿರುವ ರವಿ ಕುಮಾರ್ ದಹಿಯಾ ಮತ್ತು ಮಹಿಳಾ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಬುಧವಾರ ರವಿ ಕುಮಾರ್ ದಹಿಯಾ ಆಡಿದ ಮೂರು ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸಿ 57ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇವರ ಜೊತೆಗೆ ಭಾರತದ ಹಾಕಿ ತಂಡ ಮತ್ತು ದೀಪಕ್ ಪೂನಿಯಾ ಕಂಚಿಗಾಗಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ರವಿ ಕುಮಾರ್ ದಹಿಯಾ-ಕುಸ್ತಿ:
ದಹಿಯಾ ಈಗಾಗಲೇ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ರವಿಕುಮಾರ್ ಅವರ ಸ್ವಗ್ರಾಮದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ರವಿ ಕುಮಾರ್ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ 5ನೇ ಪದಕ ಮತ್ತು 2020ರಲ್ಲಿ 4ನೇ ಪದಕವನ್ನು ಖಚಿಪಡಿಸಿದ್ದಾರೆ. ಒಲಿಂಪಿಕ್ಸ್ನಲ್ಲಿ ಫೈನಲ್ಗೆ ಅರ್ಹತೆ ಪಡೆದ ಭಾರತದ ಎರಡನೇ ಕುಸ್ತಿಪಟು ಎನಿಸಿಕೊಂಡಿರುವ ರವಿ ಕುಮಾರ್ ದಹಿಯಾ ಇಂದು ನಡೆಯುವ ಫೈನಲ್ನಲ್ಲಿ ರಷ್ಯನ್ ಒಲಿಂಪಿಕ್ ಸಮಿತಿಯ ಜೌರ್ ಉಗುವ್ ಅವರ ಸವಾಲು ಎದುರಿಸಲಿದ್ದಾರೆ.
ವಿನೇಶ್ ಫೋಗಟ್:
ಮಹಿಳೆಯರ 56 ಕೆಜಿ ವಿಭಾಗದಲ್ಲಿ ಟಾಪ್ ಸೀಡ್ ಆಗಿರುವ ವಿನೇಶ್ ಫೋಗಟ್ ತಮ್ಮ ಒಲಿಂಪಿಕ್ಸ್ ಅಭಿಯಾನವನ್ನು ಇಂದು ಆರಂಭಿಸಲಿದ್ದಾರೆ. ಏಷ್ಯನ್ ಚಾಂಪಿಯನ್ ಭಾರತಕ್ಕೆ ಚಿನ್ನದ ಪದಕ ತಂದುಕೊಡಬಲ್ಲ ಬಹುದೊಡ್ಡ ನಿರೀಕ್ಷೆಯಾಗಿದ್ದಾರೆ. ಅವರು ಸೋಫಿಯಾ ಮ್ಯಾಟ್ಸನ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಹಾಕಿ ತಂಡ:
ಬರೋಬ್ಬರಿ 49 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಹಾಕಿ ತಂಡ ಮಂಗಳವಾರ ನಡೆದ ನಾಲ್ಕರ ಘಟ್ಟದಲ್ಲಿ ಬೆಲ್ಜಿಯಂ ವಿರುದ್ಧ 2-5ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ. ಆದರೆ, ಇಂದು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವ ಜರ್ಮನಿ ವಿರುದ್ಧ ಸೆಣಸಾಡಲಿದೆ.
ದೀಪಕ್ ಪೂನಿಯಾ
87 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಸೋಲು ಕಂಡಿರುವ 22 ವರ್ಷದ ಯುವ ಕುಸ್ತಿಪಟು ಕಂಚಿನ ಪದಕಕ್ಕಾಗಿ ರೆಪ್ಚೇಜ್ನಲ್ಲಿ ಗೆದ್ದುಬರುವ ಕುಸ್ತಿಪಟುವಿನೊಂದಿಗೆ ಸೆಣಸಾಡಲಿದ್ದಾರೆ.
ಇದನ್ನೂ ಓದಿ: Tokyo Olympics: ಎದುರಾಳಿ ಕಚ್ಚಿದ್ರೂ ಧೃತಿಗೆಡದೆ ಗೆದ್ದ ರವಿ... ಕುಸ್ತಿಪಟುಗೆ ಭೇಷ್ ಎಂದ ಸೆಹ್ವಾಗ್