ಟೋಕಿಯೊ: ಒಲಿಂಪಿಕ್ಸ್ ಸಿಂಗಲ್ಸ್ ಟೆನ್ನಿಸ್ ಚಾಂಪಿಯನ್ ಬೆಲಿಂಡಾ ಬೆನ್ಸಿಕ್ ತನ್ನ ಮೊಟ್ಟ ಮೊದಲ ಚಿನ್ನದ ಪದಕವನ್ನು ಪ್ರಸಿದ್ದ ಆಟಗಾರ ಹಾಗು ತನ್ನ ದೇಶದವರೇ ಆಗಿರುವ ರೋಜರ್ ಫೆಡರರ್‌ಗೆ ಅರ್ಪಿಸಿದರು. ಪಂದ್ಯಕ್ಕಿಂತ ಮೊದಲು ಅವರು ನೀಡಿದ ಸಲಹೆ, ಸೂಚನೆಗಳು ನನ್ನ ಗೆಲುವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಬರೋಬ್ಬರಿ 20 ಬಾರಿ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್, ಇದುವರೆಗೆ ಒಲಿಂಪಿಕ್ಸ್ನಲ್ಲಿ ಒಂದೇ ಒಂದು ಚಿನ್ನದ ಪದಕ ಪಡೆದಿಲ್ಲ. 2008 ರ ಬೀಜಿಂಗ್ ಒಲಿಂಪಿಕ್ಸ್ನ ಡಬಲ್ಸ್ ವಿಭಾಗದಲ್ಲಿ ಕಂಚು ಮತ್ತು 2012 ರ ಲಂಡನ್ ಒಲಿಂಪಿಕ್ಸ್ನಲ್ಲಿ ಆ್ಯಂಡಿ ಮುರ್ರೆ ವಿರುದ್ದ ಸೋತು ಬೆಳ್ಳಿ ಪದಕ ಗೆಲ್ಲುವಲ್ಲಿ ಮಾತ್ರ ಅವರು ಸಫಲರಾಗಿದ್ದಾರೆ.
ಬೆನ್ಸಿಕ್ ಅವರಿಗೆ ಸ್ಫೂರ್ತಿಯಾಗಿರುವ ಇನ್ನೊಬ್ಬರು ಸ್ವಿಸ್ ಆಟಗಾರ್ತಿ ಮಾರ್ಟೀನಾ ಹಿಂಗಿಸ್ ಕೂಡ ಒಲಿಂಪಿಕ್ಸ್ನಲ್ಲಿ ಚಿನ್ನದ ಪಕದ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಅವರ ಒಲಿಂಪಿಕ್ಸ್ ಸಾಧನೆಯೆಂದರೆ 2016 ರ ಕ್ರೀಡಾಕೂಟದ ಡಬಲ್ಸ್ ವಿಭಾಗದಲ್ಲಿ ಟೈಮಾ ಬ್ಯಾಕ್ಸಿನ್ಸ್ಕಿ ಜೊತೆ ಬೆಳ್ಳಿ ಪದಕ ಗೆದ್ದಿರುವುದು.
ಇದನ್ನೂ ಓದಿ: 10.61 ಸೆಕೆಂಡ್ನಲ್ಲಿ 100 ಮೀಟರ್ ಓಟ.. ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಜಮೈಕಾ ಓಟಗಾರ್ತಿ
12 ನೇ ಶ್ರೇಯಾಂಕದ ಬೆನ್ಸಿಕ್, ಶನಿವಾರದ ನಡೆದ ಟೋಕಿಯೋ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಝೆಕ್ ರಿಪಬ್ಲಿಕ್ನ ಮಾರ್ಕೆಟ ವೊಂಡ್ರೊಸೊವಾ ಅವರನ್ನು 7-5, 2-6, 6-3 ಸೆಟ್ಗಳಿಂದ ಸೋಲಿಸಿ ವೃತ್ತಿ ಜೀವನದ ಮೊದಲ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು. ಭಾನುವಾರ ನಡೆಯಲಿರುವ ಮಹಿಳಾ ಡಬಲ್ಸ್ ವಿಭಾಗದ ಪಂದ್ಯದಲ್ಲೂ ಚಿನ್ನದ ಬೇಟೆಗಾಗಿ ಅವರು ಕಣಕ್ಕಿಳಿಯಲಿದ್ದಾರೆ.
ಚಿನ್ನದ ಪಕದ ಗೆದ್ದ ಬಗ್ಗೆ ಮಾತನಾಡಿದ ಬೆನ್ಸಿಕ್, ನನ್ನ ಸ್ಫೂರ್ತಿಗಳಾದ ಫೆಡರರ್ ಮತ್ತು ಹಿಂಗಿಸ್ ಅವರು ಯಾವುದರಲ್ಲಿ ವಿಫಲರಾಗಿದ್ದರೋ, ಅದನ್ನು ನಾನು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ಈ ಪದಕವನ್ನು ಅವರಿಗಾಗಿ ಪಡೆದೆ ಎಂಬ ಭಾವನೆ ನನಗಿದೆ. ಅವರ ಸಾಧನೆಯ ಮುಂದೆ ನನ್ನದೇನೂ ಅಲ್ಲ. ಅವರು ಮಾಡಿದ ಸಾಧನೆಯನ್ನು ನಾನೆಂದಿಗೂ ಮಾಡಲು ಸಾಧ್ಯವಾಗುವುದಿಲ್ಲ. ಆದರೂ, ಈ ಒಂದು ಪದಕದ ಮೂಲಕ ಅವರ ಸಾಧನೆಯ ಸರಿ ಸಮಾನಳಾಗಲು ಪ್ರಯತ್ನಿಸಿದ್ದೇನೆ. ಈ ಪದಕವನ್ನು ಮಾರ್ಟೀನಾ ಮತ್ತು ಫೆಡರರ್‌ಗೆ ಅರ್ಪಿಸುತ್ತೇನೆ ಎಂದು ಭಾವುಕರಾದರು.
ಬೆನ್ಸಿಕ್ ಮತ್ತು ಅವರ ಸಹವರ್ತಿ ಸ್ವಿಸ್ನ ವಿಕ್ಟೋರಿಜಾ ಗೊಲುಬಿಕ್ ಜೋಡಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಝೆಕ್ ಜೋಡಿ ಬಾರ್ಬೊರಾ ಕ್ರೆಜಿಕೋವಾ ಮತ್ತು ಕತ್ರಿನಾ ಸಿನಿಕೋವಾ ಅವರನ್ನು ಭಾನುವಾರ ನಡೆಯುವ ಪಂದ್ಯದಲ್ಲಿ ಎದುರಿಸಲಿದ್ದಾರೆ.