ಟೋಕಿಯೋ: ಇಂದು ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಭಾರತೀಯ ಬಾಕ್ಸರ್ ಸತೀಶ್ ಕುಮಾರ್ +91 ಕೆಜಿ ವಿಭಾಗದಲ್ಲಿ ಜಮೈಕಾ ಆಟಗಾರ ರಿಕಾರ್ಡೊ ಬ್ರೌನ್ ಅವರನ್ನು ಸೋಲಿಸಿದರು. ಈ ಮೂಲಕ ಸತೀಶ್ ತಮ್ಮ ಚೊಚ್ಚಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಎರಡು ಬಾರಿಯ ಏಷ್ಯನ್ ಚಾಂಪಿಯನ್ಶಿಪ್ನ ಕಂಚಿನ ವಿಜೇತ ಸತೀಶ್ಗೆ ಪಂದ್ಯದ ಉದ್ದಕ್ಕೂ ಬ್ರೌನ್ರ ಕಳಪೆ ಆಟವೇ ಗೆಲುವಿಗೆ ಸಹಾಯಕವಾಯಿತು. ಹೀಗಾಗಿ ಅವರು 4-1 ಪಾಯಿಂಟ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರು.
ಆಗಸ್ಟ್ 1ರಂದು ವಿಶ್ವದ ಮತ್ತು ಏಷ್ಯಾದ ಚಾಂಪಿಯನ್ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೋವ್ ವಿರುದ್ಧ 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಜಲೋಲೋವ್ ಅಜರ್ಬೈಜಾನ್ನ ಮಹಮ್ಮದ್ ಅಬ್ದುಲ್ಲಾಯೇವ್ ಅವರನ್ನು 5-0 ಪಾಯಿಂಟ್ ಮೂಲಕ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
31 ವರ್ಷದ ಬ್ರೌನ್ 1996 ರಿಂದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ತನ್ನ ದೇಶದ ಮೊದಲ ಬಾಕ್ಸರ್ ಆಗಿದ್ದಾರೆ. ಇವರು ಉದ್ಘಾಟನಾ ಸಮಾರಂಭದಲ್ಲಿ ಜಮೈಕಾದ ಧ್ವಜ ಹಿಡಿದು ಪ್ರತಿನಿಧಿಸಿದ್ದರು.
ಬ್ರೌನ್ 2014 ರವರೆಗೆ ಜಮೈಕಾದಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಈಗ ಕೆನಡಾ ಮೂಲದ ಸಾವಯವ ಜ್ಯೂಸ್ ಕಂಪನಿಯಾದ 'ಸೆನ್ಸಿ ಜ್ಯೂಸ್'ನ ಸಹ ಸಂಸ್ಥಾಪಕರಾಗಿದ್ದಾರೆ.
ಇಂದು ಮಧ್ಯಾಹ್ನ ಮೇರಿ ಕೋಮ್ ವರ್ಸಸ್ ಲೂರಿನಾ ಮಧ್ಯೆ ಬಾಕ್ಸಿಂಗ್ ಪಂದ್ಯ ನಡೆಯಲಿದೆ.