ಇಂಪಾಲ್(ಮಣಿಪುರ): ಟೋಕಿಯೋ ಒಲಿಂಪಿಕ್ಸ್ನಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚನು ಬೆಳ್ಳಿ ಪದಕ ಗೆಲ್ಲುವ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ, ಈ ಹಿಂದೆ ಬೆನ್ನು ನೋವಿಗೊಳಗಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಗೆ ಸಹಾಯ ಮಾಡಿದ್ದರೂ ಎಂಬ ವಿಷಯ ಬಹಿರಂಗಗೊಳಿಸಿದ್ದಾರೆ.
ಇದೇ ವಿಷಯವಾಗಿ ಮಾತನಾಡಿದ್ದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಮೀರಾಬಾಯಿ ಚನುಗೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಸಹಾಯ ಮಾಡಿದ್ದಾರೆ. ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ತರಬೇತಿ ಪಡೆದುಕೊಳ್ಳಲು ನೆರವಾಗಿದ್ದರು ಎಂದು ಹೇಳಿದ್ದರು. ಒಂದು ವೇಳೆ ಮೀರಾಬಾಯಿ ಚನು ಅಮೆರಿಕಕ್ಕೆ ಹೋಗಿ ವೈದ್ಯಕೀಯ ಚಿಕಿತ್ಸೆ ಹಾಗೂ ತರಬೇತಿ ಪಡೆದುಕೊಳ್ಳದಿದ್ದರೆ ಒಲಿಂಪಿಕ್ಸ್ನಲ್ಲಿ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚನು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನನಗೆ ತುಂಬಾ ಸಹಾಯ ಮಾಡಿದ್ದಾರೆ. ಗಾಯಗೊಂಡಿದ್ದ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಲು ವಿಮಾನ ಟಿಕೆಟ್ ವ್ಯವಸ್ಥೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು. ತರಬೇತಿ ಸಂದರ್ಭದಲ್ಲೂ ಅವರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಚನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಸೆಮೀಸ್ನಲ್ಲಿ ಸೋತ ಬಜರಂಗ್ ಪೂನಿಯಾ.. ಕಂಚಿನ ಪದಕಕ್ಕಾಗಿ ಮುಂದಿನ ಪಂದ್ಯದಲ್ಲಿ ಫೈಟ್
ಮೀರಾ ಬಾಯಿ ಚನುಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಮಧ್ಯಪ್ರವೇಶ ಮಾಡಿ ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದರು. ಅದರ ಫಲವಾಗಿ ಚನು ಈ ಸಲದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.