ನವದೆಹಲಿ: 2020ನೇ ಸಾಲಿನ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಹೊಸ ಸಾಧನೆ ಬರೆದಿದ್ದು, ಈಗಾಗಲೇ ಅನೇಕ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ಇದರ ಮಧ್ಯೆ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಸದ್ಯ ದೆಹಲಿ ಅಶೋಕ್ ಹೊಟೇಲ್ನಲ್ಲಿ ನೀರಜ್ ಚೋಪ್ರಾ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದಲೇ ನಿನ್ನೆ ಹರಿಯಾಣ ಸರ್ಕಾರದಿಂದ ಆಯೋಜನೆಗೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಚೇತರಿಕೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಕೋವಿಡ್ ವರದಿ ನೆಗೆಟಿವ್
ನೀರಜ್ ಚೋಪ್ರಾ ಅವರಿಗೆ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಅದರ ವರದಿ ನೆಗೆಟಿವ್ ಆಗಿದೆ. ನಿನ್ನೆ ಅವರಿಗೆ 103 ಡಿಗ್ರಿ ಜ್ವರವಿತ್ತು. ಆದರೆ, ಇಂದು ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿರುವ ಎಲ್ಲ ಭಾರತೀಯ ಅಥ್ಲೀಟ್ಸ್ಗಳು ನಾಳೆ ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಜಪಾನ್ನ ಟೋಕಿಯೋದಲ್ಲಿ ನಡೆದ ಜಾವೆಲಿನ್ ಥ್ರೋದಲ್ಲಿ ಭಾರತದ ಅಥ್ಲೀಟ್ಸ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಬಂದಿರುವ ಏಕೈಕ ಚಿನ್ನದ ಪದಕ ಇದಾಗಿದೆ.
ಇದನ್ನೂ ಓದಿರಿ: ಚಿನ್ನದ ಬೆಳಕಿನಲ್ಲಿ ಭಾರತ ಬೆಳಗಿದ ನೀರಜ್ ಚೋಪ್ರಾಗೆ ಮತ್ತೊಂದು ಸಿಹಿ ಸುದ್ದಿ!
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್, 1315 ಅಂಕಗಳನ್ನು ಪಡೆದು ವಿಶ್ವ ಅಥ್ಲೆಟಿಕ್ಸ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದರು.