ಇಂಫಾಲ್(ಮಣಿಪುರ): ಕ್ರೀಡಾಪಟುಗಳು ಜೀವನ ಆಧಾರಿತ ಚಿತ್ರಗಳು ಈಗಾಗಲೇ ಸಿನಿಮಾ ರೂಪದಲ್ಲಿ ತೆರೆ ಕಂಡಿದ್ದು, ಇದೀಗ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚನು ಜೀವನಾಧಾರಿತ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಇಂಫಾಲ್ ಮೂಲದ ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್(Seuti Films Production) ಸಂಸ್ಥೆ ಮುಂದಾಗಿದೆ.
ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚನು ಅವರ ಒಪ್ಪಿಗೆ ಪಡೆದುಕೊಂಡು ಸಹಿ ಮಾಡಿಸಿಕೊಳ್ಳಲಾಗಿದ್ದು, ಸಿನಿಮಾ ಇಂಗ್ಲೀಷ್, ಮಣಿಪುರಿ ಸೇರಿದಂತೆ ಭಾರತೀಯ ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಂಸ್ಥೆಯ ಮುಖ್ಯಸ್ಥ ಮನೋಬಿ, ಈಗಾಗಲೇ ನಟಿ ಹುಡುಕಾಟಕ್ಕಾಗಿ ನಾವು ಮುಂದಾಗಿದ್ದು, ಮೀರಾಬಾಯಿ ಚನು ಅವರಿಗೆ ಹೊಂದಿಕೆಯಾಗುವಂತಹ ನಟಿ ಇದರಲ್ಲಿ ನಟನೆ ಮಾಡಲಿದ್ದಾರೆ ಎಂದಿದ್ದಾರೆ. ಚಿತ್ರ ನಿರ್ಮಾಣಕ್ಕಾಗಿ ಸುಮಾರು ಆರು ತಿಂಗಳ ಕಾಲ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲು ನಿರ್ಧರಿಸಲಾಗಿದ್ದು, ಚನು ಅವರ ವಯಸ್ಸು ಹಾಗೂ ಎತ್ತರ ಜೊತೆಗೆ ಮೈಕಟ್ಟಿಗೆ ಹೊಂದಿಕೆಯಾಗುವಂತಹ ನಟಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಣಿಪುರದ ಇಂಫಾಲ್ನ ಪುಟ್ಟ ಗ್ರಾಮದಿಂದ ಬಂದಿರುವ ಚನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈಗಾಗಲೇ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ, ಬಾಕ್ಸರ್ ಮೇರಿ ಕೋಮ್, ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಸೇರಿದಂತೆ ಅನೇಕರ ಚಿತ್ರ ತೆರೆ ಕಂಡಿವೆ.