ನವದೆಹಲಿ: ಟೋಕಿಯೋದಲ್ಲಿ ಆಗಸ್ಟ್ 24 ರಿಂದ ಆರಂಭವಾಗಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗಾಗಿ ಭಾರತವು 9 ಕ್ರಿಡೆಗಳಲ್ಲಿ 54 ಆಟಗಾರರು ಭಾಗವಹಿಸಲಿದ್ದಾರೆ. ಪ್ಯಾರಾ ಆರ್ಚರಿ, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಕ್ಯಾನೋಯಿಂಗ್, ಪ್ಯಾರಾ ಶೂಟಿಂಗ್, ಪ್ಯಾರಾ ಸ್ವಿಮ್ಮಿಂಗ್, ಪ್ಯಾರಾ ಪವರ್ ಲಿಫ್ಟಿಂಗ್, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಕ್ವಾಂಡೋಗಳಲ್ಲಿ ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ.
ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಶರಣ್ ಸಿಂಗ್ ಮಾತನಾಡಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ಐದು ಚಿನ್ನ ಸೇರಿದಂತೆ ಕನಿಷ್ಠ 15 ಪದಕಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ರಿಡಾಕೂಟದಲ್ಲಿ ಭಾಗವಹಿಸಲು ನಮ್ಮ ಕ್ರೀಡಾಪಟುಗಳು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅದರ ಫಲಿತಾಂಶವಾಗಿ ನಾವು ಕನಿಷ್ಠ 15 ಪದಕ ಗೆದ್ದೇ ಗೆಲ್ಲುತ್ತೇವೆ ಎಂದರು.
ನಾವು ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಆರ್ಚರಿ ಮತ್ತು ಪ್ಯಾರಾ ಶೂಟಿಂಗ್ ನಲ್ಲಿ ಪದಕಗಳನ್ನು ನಿರೀಕ್ಷಿಸುತ್ತಿದ್ದೇವೆ. ಭಾರತವು 11 ಪ್ಯಾರಾಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ ಎಂದರು.
ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್ ನೇತೃತ್ವದ ಮೊದಲ ತಂಡ ಟೋಕಿಯೋ ತಲುಪಿದೆ. ತಂಗವೇಲು ಮರಿಯಪ್ಪನ್, ಭಾರತ ತಂಡದ ಪರ ಧ್ವಜ ಹಿಡಿದು ನಡೆಯಲಿದ್ದಾರೆ. ಹಿಂದಿನ ಕ್ರೀಡಾಕೂಟದಲ್ಲಿ ಹೈಜಂಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮರಿಯಪ್ಪನ್ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ ನಲ್ಲಿ 1.86 ಮೀ ಎತ್ತರ ಜಿಗಿದಿದ್ದಾರೆ.
ಮರಿಯಪ್ಪನ್ ಹೊರತುಪಡಿಸಿ, ಭಾರತವು ಎರಡು ಬಾರಿ ಪ್ಯಾರಾಲಿಂಪಿಕ್ ಚಾಂಪಿಯನ್ ದೇವೇಂದ್ರ ಜಜಾರಿಯಾ (ಎಫ್ 46) ನೇತೃತ್ವದ ಪ್ಯಾರಾ ಜಾವೆಲಿನ್ ಎಸೆತಗಾರರಿಂದ ಪದಕದ ಭರವಸೆಯಿದೆ.