ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕೆಂದು ನಾವು ಕಳೆದ 15 ತಿಂಗಳಿನಿಂದ ಕಠಿಣ ಪರಿಶ್ರಮ ಪಟ್ಟಿದ್ದೆವು. ಕುಟುಂಬದಿಂದ ದೂರ ಉಳಿದು ತ್ಯಾಗ ಮಾಡಿದ್ದೆವು. ಕೊನೆಗೂ ಭಾರತ ದಶಕಗಳ ಕಾಲ ಕಾಯುತ್ತಿದ್ದ ಪದಕವನ್ನು ಗೆದ್ದಿರುವುದರಿಂದ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ ಎಂದು ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ಈಟಿವಿ ಭಾರತದ ಜೊತೆ ಮಾತನಾಡಿದ ಮನ್ಪ್ರೀತ್ ಸಿಂಗ್, ಕಳೆದ 15 ತಿಂಗಳು ನಮಗೆ ತುಂಬಾ ಕಠಿಣವಾಗಿತ್ತು. ಏಕೆಂದರೆ ನಾವು ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿದ್ದೆವು. ಈ ಸಂದರ್ಭದಲ್ಲಿ ನಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಒಲಿಂಪಿಕ್ಸ್ನಲ್ಲಿ ಪಡೆದ ಕಂಚಿನ ಪದಕದ ಹಿಂದೆ ಇಡೀ ನಮ್ಮ ತಂಡದ ಕಠಿಣ ಶ್ರಮ ಮತ್ತು ತ್ಯಾಗವಿದೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ನಲ್ಲಿ ನಾಲ್ಕು ದಶಕಗಳಿಂದ ನಾವು ಪದಕ ಗೆದ್ದಿರಲಿಲ್ಲ. ಇದೀಗ ದೀರ್ಘ ಸಮಯದ ನಂತರ ನಮಗೆ ಸಿಕ್ಕಿದೆ. ನಾವು ಕಂಚಿನ ಪದಕ ಗೆಲ್ಲುವ ಮೂಲಕ ಕಾಯುವಿಕೆ ಕೊನೆಯಾಗಿದೆ ಎಂದು ಮನ್ಪ್ರೀತ್ ಹೇಳಿದ್ದಾರೆ.
ಇಡೀ ದೇಶವೇ ಸ್ವಾಗತಿಸಿದಂತಿತ್ತು
ಟೋಕಿಯೋದಿಂದ ಮರಳಿದಾಗ ನವದೆಹಲಿಯಲ್ಲಿ ನಮಗೆ ಸಿಕ್ಕಂತಹ ಸ್ವಾಗತವನ್ನು ಕಂಡು ತುಂಬಾ ಖುಷಿಯಾಯಿತು. ಇಡೀ ದೇಶವೇ ನಮ್ಮನ್ನು ಸ್ವಾಗತಿಸುತ್ತಿದೆಯೇನೋ ಎಂಬ ಭಾವನೆ ಉಂಟಾಯಿತು ಎಂದು ಹಾಕಿ ತಂಡದ ನಾಯಕ ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವ ವರ್ಣಿಸಿದ್ದಾರೆ.
ಅಲ್ಲದೇ ಸೆಮಿಫೈನಲ್ನಲ್ಲಿ ನಾವು ಸೋಲು ಕಂಡಾಗ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಸೋತಿದ್ದಕ್ಕೆ ಚಿಂತಿಸಬೇಡಿ. ಮುಂದಿನ ಕಂಚಿನ ಪದಕದ ಪಂದ್ಯಕ್ಕೆ ಸಿದ್ಧರಾಗಿ ಎಂದು ಹೇಳಿದರು. ಅಲ್ಲದೇ ಇಡೀ ದೇಶವೇ ನಿಮ್ಮ ಜೊತೆಯಿದೆ. ನೀವು ನಿಶ್ಚಿಂತಿಯಿಂದ ಮುಂದಿನ ಪಂದ್ಯಕ್ಕೆ ಗಮನಹರಿಸಿ ಎಂದು ಪ್ರೇರಣೆ ನೀಡಿದರು ಎಂದು ಮನ್ಪ್ರೀತ್ ನೆನಪಿಸಿಕೊಂಡರು.
ಭಾರತ ಹಾಕಿ ತಂಡ ಕಂಚಿನ ಪದಕದ ಪಂದ್ಯದಲ್ಲಿ 5-4 ಅಂಕಗಳ ಅಂತರದಿಂದ ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕ ಪಡೆದಿತ್ತು. ಭಾರತ ಕೊನೆಯ ಬಾರಿ 1980ರ ಮಾಸ್ಕೊ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿತ್ತು. ಇದೀಗ ಬರೋಬ್ಬರಿ 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆ ಮಾಡಿದೆ.
ಇದನ್ನು ಓದಿ: ನೀರಜ್ ಸಾಧನೆಯ ನೆನಪಿಗೆ ಆಗಸ್ಟ್ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ