ಮೆಲ್ಬೋರ್ನ್: ಅಮೆರಿಕಾದ ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ನವೋಮಿ ಒಸಾಕ ವಿರುದ್ಧ ಸೋತು ನಿರಾಸೆಯನುಭವಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು.
39 ವರ್ಷದ ಸೆರೆನಾ ಇನ್ನೊಂದು ಗ್ರ್ಯಾಂಡ್ ಸ್ಲಾಮ್ ಗೆದ್ದರೆ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾಂಡ್ ಸ್ಲಾಮ್ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದರು. ಆದರೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ನವೋಮಿ ಒಸಾಕ ವಿರುದ್ಧ 3-6, 4-6ರಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.
2-0ಯಲ್ಲಿ ಮುನ್ನಡೆ ಸಾಧಿಸಿದ ನಂತರವೂ ಸೋಲಿಗೆ ಮಾಡಿದ ಎಡವಟ್ಟುಗಳೇನು ಎಂದು ಕೇಳಿದ್ದಕ್ಕೆ, 'ನನಗೆ ಗೊತ್ತಿಲ್ಲ, ನಾನು ಹಲವಾರು ತಪ್ಪುಗಳನ್ನು ಮಾಡಿದೆ' ಎಂದು ಕಣ್ಣೀರಿಡುತ್ತಾ ಪತ್ರಿಕಾಗೋಷ್ಠಿಯಿಂದ ಹೊರ ನಡೆದರು. ಈ ಪಂದ್ಯದಲ್ಲಿ ಸೆರೆನಾ 24 ತಪ್ಪುಗಳನ್ನು ಮಾಡಿ ಅಂಕ ಬಿಟ್ಟುಕೊಟ್ಟರೆ, ಒಸಾಕ ಕೇವಲ 6 ಅಂಕಗಳನ್ನು ಮಾತ್ರ ತಮ್ಮ ತಪ್ಪುಗಳಿಗಾಗಿ ಬಿಟ್ಟುಕೊಟ್ಟರು.
ಇಂದಿನ ಪಂದ್ಯದಲ್ಲಿನ ವ್ಯತ್ಯಾಸವೆಂದರೆ ದೋಷಗಳು ಮಾತ್ರ. ನಾನು ಇಂದು ಅನೇಕ ತಪ್ಪುಗಳನ್ನು ಎಸಗಿದ್ದೇನೆ. ನಾನು 5-0 ಅಂತರದಲ್ಲಿರಬಹುದಾದ ಅವಕಾಶವನ್ನು ಕೈಚೆಲ್ಲಿದೆ, ಅಲ್ಲದೆ ತುಂಬಾ ಸುಲಭದ ದೋಷಗಳನ್ನು ಮಾಡಿದ್ದೇನೆ. ಅದರಲ್ಲೂ ಫೋರ್‌ಹ್ಯಾಂಡ್ ಬಲವಂತದ ದೋಷಗಳಾಗಿದ್ದು, ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದರು.
"ಇಡೀ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡಿದ್ದೆ. ಈ ಪಂದ್ಯದ ಮೊದಲ ಎರಡು ಗೇಮ್ಗಳಲ್ಲಿ ನಾನು ಚೆನ್ನಾಗಿ ಆಡಿದ್ದೆ, ಅಲ್ಲದೆ ನನಗೆ ಹಲವು ಅವಕಾಶಗಳಿದ್ದವು. ಆದರೆ ಏನಾಯಿತೋ ಗೊತ್ತಿಲ್ಲ ... ಆ ಹಂತದಲ್ಲಿ ಹಲವಾರು ತಪ್ಪು ಮಾಡಿದೆ. ಅವೆಲ್ಲವೂ ಸುಲಭವಾದ ತಪ್ಪುಗಳು" ಎಂದು ಅವರು ಭಾವುಕರಾಗಿ ಹೇಳಿದರು.