ಬರ್ಲಿನ್: ಭಾರತದ ಉದಯೋನ್ಮುಖ ಟೆನಿಸ್ ತಾರೆ ಸುಮಿತ್ ನಗಾಲ್ ಕೋವಿಡ್ 19 ವಿರಾಮದ ನಂತರ ಮೊದಲ ಟ್ರೋಫಿ ಗೆದ್ದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜರ್ಮನಿ ಮಣ್ಣಿನ ಅಂಗಳದಲ್ಲಿ ನಡೆದ ಪಿಎಸ್ಡಿ ನಾರ್ಡ್ ಓಪನ್ ಟ್ರೋಫಿ ಜಯಿಸುವ ಮೂಲಕ ನಗಾಲ್ ದೀರ್ಘ ವಿರಾಮದ ಬಳಿಕ ಭಾರತದಕ್ಕೆ ಮೊದಲ ಪ್ರಶಸ್ತಿ ತಂದು ಕೊಟ್ಟಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ 127ನೇ ಶ್ರೇಯಾಂಕ ಪಡೆಯುವ ಮೂಲಕ ಭಾರತದ ಅಗ್ರ ಆಟಗಾರನಾಗಿರುವ ನಗಾಲ್ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಜರ್ಮನಿಯ ಡೇನಿಯಲ್ ಮಸೂರ್ ಅವರನ್ನು 6-1, 6-3ರ ನೇರ ಸೆಟ್ಗಳಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸುಮಾರು ನಾಲ್ಕು ತಿಂಗಳ ನಂತರ ಟೆನಿಸ್ ಅಂಗಳಕ್ಕೆ ಮರಳಿರುವುದು ಒಳ್ಳೆಯ ಬೆಳವಣಿಗೆ ಎಂದು ನಗಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸನ್ನಿವೇಶದಲ್ಲಿ ಈ ಟೂರ್ನಮೆಂಟ್ ಅವಾಸ್ತವ ಮತ್ತು ಅದ್ಭುತ, ಇದೊಂದು ಚಿಕ್ಕ ಟೂರ್ನಮೆಂಟ್, 60 ಕ್ಕಿಂತ ಕಡಿಮೆ ಆಟಗಾರರು ಪಾಲ್ಗೊಳ್ಳುವ ಟೂರ್ನಮೆಂಟ್. ಅಲ್ಲದೇ ನಾನು ತರಬೇತಿ ಪಡೆಯುವ ಸ್ಥಳಕ್ಕೆ ತುಂಬಾ ಹತ್ತಿರವಾಗಿದ್ದರಿಂದ, ನಾನೇಕೆ ಇಲ್ಲಿ ಕೆಲವು ಪಂದ್ಯಗಳನ್ನು ಆಡಬಾರದು ಎಂದು ಆಲೋಚಿಸಿ ಟೂರ್ನಿಯಲ್ಲಿ ಭಾಗವಹಿಸಿದೆ ಎಂದು ನಗಾಲ್ ತಿಳಿಸಿದ್ದಾರೆ.
ನಗಾಲ್ ಕೊಬೆಯ ಬಾರಿ ಕ್ರೊವೇಶಿಯಾ ವಿರುದ್ಧ ಡೇವಿಸ್ ಕಪ್ನಲ್ಲಿ ಸ್ಪರ್ಧಾತ್ಮಕ ಟೆನಿಸ್ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದರು.
ಪಂದ್ಯಕ್ಕೂ ಮೊದಲು ಟೆಂಪರೇಚರ್ ಚೆಕ್ ಮಾಡುವುದು, ಟೆನಿಸ್ ಕೋರ್ಟ್ಗೆ ಧಾವಿಸುವ ಮುನ್ನ ಸ್ಯಾನಿಟೈಸರ್ ಬಳಕೆ ಮಾಡುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹೀಗೆ ಈ ಟೂರ್ನಿ ಹಿಂದೆಂದಿಗಿಂತಲೂ ವಿಶೇಷವಾಗಿತ್ತು ಎಂದು ಇಂಡಿಯನ್ ಸ್ಟಾರ್ ಆಟಗಾರ, ಈ ಟೂರ್ನಿಯಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.