ಸಿಡ್ನಿ : ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯಾ ಓಪನ್ಗೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಟಿಪಿ ಕಪ್ನಿಂದ ದೂರ ಸರಿದಿದ್ದಾರೆ ಎಂದು ಆಯೋಜಕರು ಬುಧವಾರ ಖಚಿತಪಡಿಸಿದ್ದಾರೆ.
ಅಗ್ರ ಶ್ರೇಯಾಂಕದ ಆಟಗಾರ ಟೂರ್ನಿಯಿಂದ ಹೊರ ಬರುತ್ತಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಆದರೆ, ಸರ್ಬಿಯಾದ ಸ್ಟಾರ್ ಇತ್ತೀಚಿನ ದಿನಗಳಲ್ಲಿ ತಮ್ಮ ಕೋವಿಡ್ ವ್ಯಾಕ್ಸಿನೇಷನ್ ಸ್ಟೇಟಸ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಆದರೆ, ಆಸ್ಟ್ರೇಲಿಯಾ ಸರ್ಕಾರ ಎಲ್ಲಾ ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ವೀಕ್ಷಕರು ಕಡ್ಡಾಯವಾಗಿ ಕೋವಿಡ್-19ಗೆ ಲಸಿಕೆ ಪಡೆದಿರಬೇಕೆಂದು ನಿಯಮವನ್ನು ಜಾರಿಗೆ ತಂದಿದೆ.
16 ದೇಶಗಳು ಸ್ಪರ್ಧಿಸುವ ಈ ಟೂರ್ನಮೆಂಟ್ನಲ್ಲಿ ಜೋಕೊವಿಕ್ ಭಾಗವಹಿಸುತ್ತಿಲ್ಲ ಎನ್ನುವುದನ್ನು ಆಯೋಜಕರು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಡೊಮೆನಿಕ್ ಥೀಮ್ ಮತ್ತು ಡೇನಿಸ್ ನೊವಾಕ್ ಟೂರ್ನಿಯಿಂದ ಹಿಂದೆ ಸರಿದ ಬೆನ್ನಲ್ಲೇ ಆಸ್ಟ್ರೀಯ ಬದಲಿಗೆ ಫ್ರಾನ್ಸ್ ಟೂರ್ನಿಗೆ ಸೇರ್ಪಡೆಗೊಂಡಿದೆ ಎಂದು ಬುಧವಾರ ತಿಳಿಸಿದ್ದಾರೆ.
ಇನ್ನು ಜೋಕೊವಿಕ್ ಬದಲಿಗೆ ಸರ್ಬಿಯಾ ತಂಡಕ್ಕೆ ಡುಸಾನ್ ಲಾಜೋವಿಕ್ ಸೇರ್ಪಡೆಗೊಂಡಿದ್ದಾರೆ. 5ನೇ ಶ್ರೇಯಾಂಕದ ರಷ್ಯಾದ ಆ್ಯಂಡ್ರೆ ರುಬ್ಲೆವ್ ಕೂಡ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿರುವ ಕಾರಣ ಪಂದ್ಯಾವಳಿಯಿಂದ ಹೊರ ಬಂದಿದ್ದಾರೆ. ಶನಿವಾರದಿಂದ ಎಟಿಪಿ ಕಪ್ ಸಿಡ್ನಿಯಲ್ಲಿ ನಡೆಯಲಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸುವಿಕೆ ನಿರ್ಧರಿಸುವ ಸ್ವಾಂತತ್ರ್ಯ ಜೋಕೊವಿಕ್ಗಿದೆ: ಸಿಟ್ಸಿಪಾಸ್