ಲೌಸಾನ್(ಸ್ವಿಟ್ಜರ್ಲೆಂಡ್): ಚೀನಾ ಕಮ್ಯೂನಿಸ್ಟ್ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಂತರ ಕಣ್ಮರೆಯಾಗಿದ್ದ ಚೀನಾದ ಒಲಿಂಪಿಯನ್ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ (Chinese Tennis star Peng Shuai) ತಾವು ಬೀಜಿಂಗ್ನಲ್ಲಿ ಸುರಕ್ಷಿತವಾಗಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee) ಮುಖ್ಯಸ್ಥರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೃಢಪಡಿಸಿದ್ದಾರೆ ಎಂದು ಐಒಸಿ ತಿಳಿಸಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಧ್ಯಕ್ಷ (IOC) ಥಾಮಸ್ ಬ್ಯಾಚ್ (Thomas Bach) ಮೂರು ಬಾರಿಯ ಒಲಿಂಪಿಯನ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ವೇಳೆ, ಅಂತಾರಾಷ್ಟ್ರೀಯ ಒಲಿಂಪಿಕ್ ಅಥ್ಲೆಟಿಕ್ಸ್ ಆಯೋಗದ ಅಧ್ಯಕ್ಷೆ ಎಮ್ಮಾ ಟೆರ್ಹೊ ಮತ್ತು ಐಒಸಿಯ ಇತರೆ ಸದಸ್ಯರು ಕೂಡಾ ಇದ್ದರು. ಜೊತೆಗೆ, ಪೆಂಗ್ ಅವರನ್ನು ದೀರ್ಘ ಸಮಯದಿಂದ ನೋಡಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಲೀ ಲೀಗ್ವೀ (Li Lingwei) ಕೂಡ ಇದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಪೆಂಗ್ ಶುವಾಯ್ ನಾಪತ್ತೆ: ಚೀನಾದ ಟೂರ್ನಮೆಂಟ್ಗಳಿಂದ ಹೊರಬರುವ WTA ನಿರ್ಧಾರಕ್ಕೆ ಜೋಕೊವಿಕ್ ಬೆಂಬಲ
30 ನಿಮಿಷಗಳ ವಿಡಿಯೋ ಕರೆಯಲ್ಲಿ ಪೆಂಗ್ ಶುವಾಯ್, ತನ್ನ ಯೋಗಕ್ಷೇಮದ ಬಗೆಗಿನ ವಿಶೇಷ ಕಾಳಜಿಗಾಗಿ ಐಒಸಿಗೆ ಧನ್ಯವಾದ ಅರ್ಪಿಸಿದ್ದಾರೆ.
"ಅವರು (ಪೆಂಗ್ ಶುವಾಯ್) ತಾವು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಬೀಜಿಂಗ್ನ ತಮ್ಮ ಮನೆಯಲ್ಲಿ ಇದ್ದಾರೆಂದು ಹೇಳಿದ್ದಾರೆ. ಆದರೆ ಈ ಸಮಯದಲ್ಲಿ ಅವರು ತಮ್ಮ ಖಾಸಗಿ ಜೀವನವನ್ನು ಗೌರವಿಸಲು ಬಯಸುತ್ತಾರೆ. ಅವರು ಪ್ರಸ್ತುತ ತಮ್ಮ ಸಮಯವನ್ನು ಅವರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ತಾವಿಷ್ಟಪಡುವ ಕ್ರೀಡೆ ಟೆನಿಸ್ನಲ್ಲಿ ತೊಡಗಿಸಿಕೊಳ್ಳುವುದನ್ನು ಅವರು ಮುಂದುವರಿಸುತ್ತಾರೆ" ಎಂದು ಐಒಸಿ ತಿಳಿಸಿದೆ.
ಇದನ್ನೂ ಓದಿ: ಮಾಜಿ ಉನ್ನತ ಅಧಿಕಾರಿ ವಿರುದ್ಧ ಮೇಲೆ ಸೆಕ್ಸ್ ಆರೋಪ.. ಚೀನಾ ಟೆನಿಸ್ ಆಟಗಾರ್ತಿ ನಾಪತ್ತೆ!
ಪೆಂಗ್ ಶುವಾಯ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ಸಮಾಧಾನವಾಗಿದೆ. ಇದು ಐಒಸಿಯ ಮುಖ್ಯ ಕಾಳಜಿ ಕೂಡ ಆಗಿದೆ. ಈ ಕರೆಯಲ್ಲಿ ಅವರು ನಿರಾಳವಾಗಿರುವಂತೆ ತೋರಿತು. ನಾನು ಅವರಿಗೆ ನಮ್ಮ ಬೆಂಬಲ ನೀಡಿದ್ದೇನೆ. ಆಕೆಯ ಅನುಕೂಲಕ್ಕಾಗಿ ಯಾವುದೇ ಸಮಯದಲ್ಲೂ ಸಂಪರ್ಕದಲ್ಲಿರಲು ತಿಳಿಸಿದ್ದೇನೆ ಎಂದು ಎಮ್ಮಾ ಟೆರ್ಹೋ ತಿಳಿಸಿದರು.
ಐಒಸಿ ಅಧ್ಯಕ್ಷ ಬ್ಯಾಚ್ ಅವರು ಮುಂದಿನ ಜನವರಿಯಲ್ಲಿ ಬೀಜಿಂಗ್‌ಗೆ ಬಂದ ನಂತರ ಪೆಂಗ್ ಶುವಾಯ್ ಅವರನ್ನು ಭೋಜನಕ್ಕೆ ಆಹ್ವಾನಿಸಿದರು. ಈ ಆಹ್ವಾನವನ್ನು ಪೆಂಗ್ ಕೂಡ ಸಂತೋಷದಿಂದ ಸ್ವೀಕರಿಸಿದ್ದಾರೆ. ಐಒಸಿ ಹೇಳಿಕೆಯ ಪ್ರಕಾರ, ಎಮ್ಮಾ ಟೆರ್ಹೋ ಮತ್ತು ಲಿ ಲಿಂಗ್‌ವೀ ಈ ಔತಣ ಕೂಟದಲ್ಲಿ ಸೇರಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಐಒಸಿ ಹೇಳಿಕೆಯ ಕೊನೆಯಲ್ಲಿ ತಿಳಿಸಿದೆ.
ಚೀನಾದ ಕಮ್ಯೂವಿಸ್ಟ್ ಪಕ್ಷದ ಮಾಜಿ ಉಪಾಧ್ಯಕ್ಷ 75 ವರ್ಷದ ಜಾಂಗ್ ಗೌಲಿ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಸಂಗತಿಯನ್ನು ತಮ್ಮ ಚೈನೀಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಟೆನಿಸ್ ಸ್ಟಾರ್ ಪೆಂಗ್ ನವೆಂಬರ್ 2ರಿಂದ ಕಾಣೆಯಾಗಿದ್ದರು. ಪೆಂಗ್ ಪೋಸ್ಟ್ಗಳನ್ನು ಮತ್ತು ಅವರ ಸಾಮಾಜಿಕ ಖಾತೆಗಳನ್ನು ಚೈನೀಸ್ ಸಾಮಾಜಿಕ ನೆಟ್ವರ್ಕ್ಗಳಿಂದ ಡಿಲೀಟ್ ಮಾಡಿ ಪೆಂಗ್ ತಮ್ಮ ಸುರಕ್ಷತೆಯ ಬಗ್ಗೆ ಸಂವಹನ ಮಾಡಲು ಅಥವಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗದಂತೆ ಮಾಡಲಾಗಿತ್ತು. ಇದು ವಿಶ್ವದಲ್ಲೇ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೆ ಅವರು ಕಾಣಿಸುವವರೆಗೆ ಚೀನಾದ ಯಾವುದೇ ಟೂರ್ನಮೆಂಟ್ಗೆ ನಾವು ಭಾಗವಹಿಸುವುದಿಲ್ಲ ಎಂದು ಮಹಿಳಾ ಟೆನಿಸ್ ಒಕ್ಕೂಟ ಬಹಿರಂಗವಾಗಿ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ:Sexual Assault Row : ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಪ್ರತ್ಯಕ್ಷ