ಮೆಲ್ಬೋರ್ನ್: ಭಾರತದ ಸ್ಟಾರ್ ಟೆನ್ನಿಸ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಆಸ್ಟ್ರೇಲಿಯಾ ಓಪನ್ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಕ್ವಾಲಿಫೈಯರ್ ಸುತ್ತಿನಲ್ಲಿ ಸೋತರೂ ಲಕ್ಕಿ ಲೂಸರ್ ವಿಭಾಗದಲ್ಲಿ ಪ್ರಮುಖ ಸುತ್ತು ಪ್ರವೇಶಿಸಿದ್ದ ಗುಣೇಶ್ವರನ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲೇ ಜಪಾನ್ನ ಇಟೋ ತತ್ಸುಮ ವಿರುದ್ಧ ಸೋಲು ಕಾಣುವ ಮೂಲಕ ವಿಶ್ವ ಟೆನ್ನಿಸ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ನೊವಾಕ್ ಜೊಕಾವಿಕ್ ಅವರನ್ನು ಎದುರಿಸುವ ಸೌಭಾಗ್ಯವನ್ನು ಕಳೆದುಕೊಂಡರು.
ಗುಣೇಶ್ವರನ್ ಶ್ರೇಯಾಂಕದಲ್ಲಿ ತನಿಗಿಂತ 22 ಕಡಿಮೆಯಿರುವ ಜಪಾನ್ ಆಟಗಾರನ ವಿರುದ್ಧ 4-6, 2-6, 5-7ರ ಅಂತರದಲ್ಲಿ ಸೋಲು ಕಂಡರು. ಮೊದಲ ಎರಡು ಸೆಟ್ನಲ್ಲಿ ಗುಣೇಶ್ವರನ್ ಯಾವುದೇ ಪೈಪೋಟಿ ನೀಡದೆ ಶರಣಾದರು. ಆದರೆ ಮೂರನೇ ಸೆಟ್ನಲ್ಲಿ ಪ್ರಬಲ ಪೈಪೋಟಿ ನೀಡಿ 2-1 ರಲ್ಲಿ ಸೆಟ್ ಮುನ್ನಡೆ ಪಡೆದುಕೊಂಡಿದ್ದರು. ಆದರೆ ತಿರುಗಿ ಬಿದ್ದ ಇಟೋ 5-5 ರಲ್ಲಿ ಸಮಬಲ ಸಾಧಿಸಿದ್ದಲ್ಲದೆ ಕೊನೇಯ ಎರಡು ಗೇಮ್ಗಳನ್ನೂ ಗೆದ್ದು 7-5ರಲ್ಲಿ ಮೂರನೇ ಸೆಟ್ ವಶಪಡಿಸಿಕೊಂಡರು.
ಸಿಂಗಲ್ಸ್ನಲ್ಲಿ ತನ್ನ ಸವಾಲು ಅಂತ್ಯಗಳಿಸಿರುವ ಭಾರತದ ಆಟಗಾರರು ಡಬಲ್ಸ್ನಲ್ಲಿ ಮಾತ್ರ ಸ್ಪರ್ಧೆ ಉಳಿಸಿಕೊಂಡಿದ್ದಾರೆ. 2 ವರ್ಷಗಳ ಬಳಿಕ ಟೆನ್ನಿಸ್ಗೆ ಮರಳಿ ಹೋಬರ್ಟ್ ಚಾಂಪಿಯನ್ಶಿಪ್ ಗೆದ್ದಿರುವ ಸಾನಿಯಾ-ಕಿಚೆನೊಕ್ ಹಾಗೂ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ತಮ್ಮ ಜೊತೆಗಾರರೊಂದಿಗೆ ಕಣಕ್ಕಿಳಿಯಲಿದ್ದಾರೆ.