ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿಯಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಪೊಲೀಸರಿಗೆ ಶರಣಾಗಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಎರಡು ವಾರಗಳಿಂದ ದೆಹಲಿ ಪೊಲೀಸರು 24 ವರ್ಷದ ಸಾಗರ್ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ರನ್ನು ಬಂಧಿಸಲು ಹುಡುಕುತ್ತಿದ್ದಾರೆ. ಅಲ್ಲದೇ ಪೊಲೀಸ್ ತಂಡ ಡೆಲ್ಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಈಗಾಗಲೇ ದಾಳಿ ನಡೆಸಿದೆ. ದೆಹಲಿ ಹೈಕೋರ್ಟ್ ಕೂಡ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಅದಕ್ಕಾಗಿ 2 ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಸುಶೀಲ್ ಶರಣಾಗಲು ಬಯಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸಾಗರ್ ದೆಹಲಿ ಛತ್ರಸಾಲ ಸ್ಟೇಡಿಯಂನಲ್ಲಿ ತರಬೇತಿಗೆ ತೆರಳಿದ್ದಾಗ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಅವರ ಜೊತೆಗಾರರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸುಶೀಲ್ ಕುಮಾರ್ ಹೆಸರು ಪ್ರಧಾನವಾಗಿ ಕೇಳಿಬಂದಿತ್ತು.
ಘಟನೆ ನಡೆದಾಗಿನಿಂದ ಸುಶೀಲ್ ನಾಪತ್ತೆಯಾಗಿದ್ದರು. ಇತ್ತ ಪೊಲೀಸರ ಜಾಮೀನು ರಹಿತ ವಾರೆಂಟ್ ಮನವಿಗೆ ಹೈಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ. ಅಲ್ಲದೇ ಸುಶೀಲ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಸುಶೀಲ್ ಮಾವ, ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ. ದೆಹಲಿ ಸರ್ಕಾರಕ್ಕೂ ಪೊಲೀಸರು ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಯ ನಂತರ ಪೊಲೀಸರಿಗೆ ಶರಣಾಗಿ ಈ ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರವೇನು ಇಲ್ಲ ಎಂದು ಹೊರಬರುವುದಕ್ಕೆ ಪ್ರಯತ್ನಿಸಲು ಸುಶೀಲ್ ಬಯಸಿದ್ದಾರೆಂದು ತಿಳಿದು ಬಂದಿದೆ.
ಇದನ್ನು ಓದಿ:ಛತ್ರಸಾಲ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ