ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಆಶಿಶ್ ಚೌಧರಿ ಅವರು ಇಂದು (ಮೇ 2, ಮಂಗಳವಾರ) ಐಬಿಎ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2023 ರ 80 ಕೆಜಿ ತೂಕದ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಪಂದ್ಯಾವಳಿಯನ್ನು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಆಯೋಜಿಸಲಾಗಿದೆ. 2021 ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಇರಾನ್‌ನ ಮೆಸಮ್ ಘೆಶ್ಲಾಘಿ ವಿರುದ್ಧದ ಕಠಿಣ ಪಂದ್ಯದಲ್ಲಿ ಆಶಿಶ್ 4-1 ರಿಂದ ಗೆದ್ದಿದ್ದಾರೆ.
ಹಿಮಾಚಲ ಪ್ರದೇಶದ 28 ವರ್ಷದ ಡೈನಾಮಿಕ್ ಬಾಕ್ಸರ್ ಮೊದಲ ಸುತ್ತು ಆರಂಭವಾಗುತ್ತಿದ್ದಂತೆ ತನ್ನ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ತನ್ನ ಎದುರಾಳಿಯನ್ನು ಬ್ಯಾಕ್‌ಫೂಟ್‌ನಲ್ಲಿ ಇರಿಸಲು ಪ್ರಬಲವಾದ ಪಂಚ್ಗಳನ್ನು ಕೊಟ್ಟರು. ಮುಂದಿನ ಸುತ್ತಿನಲ್ಲಿ ಇರಾನಿನ ಬಾಕ್ಸರ್‌ನನ್ನು ಹಿಂದಿಕ್ಕಲು ಆಶಿಶ್ ತನ್ನ ಸ್ಮಾರ್ಟ್ ಚಲನೆ ಮತ್ತು ಅತ್ಯುನ್ನತ ತಾಂತ್ರಿಕ ಸಾಮರ್ಥ್ಯವನ್ನು ಬಳಸಿದರು. ಈ ಪಂದ್ಯವನ್ನು ಗೆಲ್ಲುವಲ್ಲಿ ಆಶಿಶ್ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಆಸ್ಟ್ರೇಲಿಯಾ ಮಣಿಸಿದ ಭಾರತ, ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ
2019ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಶಿಶ್ ಬೆಳ್ಳಿ ಪದಕ ಪಡೆದಿದ್ದಾರೆ. ಆಶಿಶ್ ಮುಂದೆ ಕೊನೆಯ 16 ಸುತ್ತಿನಲ್ಲಿ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಆದ ಕ್ಯೂಬಾದ ಅರ್ಲೆನ್ ಲೋಪೆಜ್ ಅವರ ಕಠಿಣ ಸವಾಲನ್ನು ಎದುರಿಸಲಿದ್ದಾರೆ.
ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಹರ್ಷ್ ಚೌಧರಿ 86 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಬಿಲ್ಲಿ ಮೆಕ್‌ಅಲಿಸ್ಟರ್ ವಿರುದ್ಧ 0-5 ರಿಂದ ಸೋತ ನಂತರ ಸ್ಪರ್ಧೆಯಿಂದ ಹೊರಬಿದ್ದಾರೆ. ನಾಳೆ (ಬುಧವಾರ, ಮೇ 3) ನಿಶಾಂತ್ ದೇವ್ (71 ಕೆಜಿ) ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ 2021 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಅಜರ್‌ಬೈಜಾನ್‌ನ ಸರ್ಖಾನ್ ಅಲಿಯೆವ್ ಅವರನ್ನು ಎದುರಿಸಲಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ 107 ದೇಶಗಳ 538 ಬಾಕ್ಸರ್‌ಗಳು ಭಾಗವಹಿಸುತ್ತಿದ್ದು, ಇದರಲ್ಲಿ ಅನೇಕ ಒಲಿಂಪಿಕ್ ಪದಕ ವಿಜೇತರು ಸಹ ಸೇರಿದ್ದಾರೆ.
ಇದನ್ನೂ ಓದಿ: 'ಇದು ಸರಿ ಕಾಣ್ತಿಲ್ಲ': ಕೊಹ್ಲಿ, ಗಂಭೀರ್ ಮಾತಿನ ಚಕಮಕಿ ಬಗ್ಗೆ ಕುಬ್ಳೆ ಅಭಿಪ್ರಾಯ