ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ವೇಳೆ ಅಶಿಸ್ತಿನಿಂದ ಅಮಾನತಿಗೆ ಒಳಗಾಗಿದ್ದ ಭಾರತದ ಕುಸ್ತಿಪಟುಗಳಾದ ವಿನೇಶ್ ಪೊಗಾಟ್, ಸೋನಂ ಮಲಿಕ್ ಮತ್ತು ದಿವ್ಯಾಗೆ ಎಚ್ಚರಿಕೆ ನೀಡಿರುವ ಭಾರತೀಯ ಕುಸ್ತಿ ಒಕ್ಕಾಟ ಅವರ ಮೇಲಿನ ಅಮಾನತು ಶಿಕ್ಷೆಯನ್ನು ಹಿಂಪಡೆದುಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್ ವೇಳೆ ವಿನೇಶ್ ಸಹವರ್ತಿಗಳೊಡನೆ ವಾಸ್ತವ್ಯ ಹೂಡಲು ನಿರಾಕರಿಸಿದ್ದರು. ಜತೆಗೆ ಪಂದ್ಯದ ವೇಳೆ ತಂಡದ ಪ್ರಾಯೋಜಕರು ನೀಡಿದ್ದ ಜೆರ್ಸಿಯನ್ನು ಧರಿಸದೇ ಬೇರಾವುದೋ ಜೆರ್ಸಿಯನ್ನು ತೊಟ್ಟಿದ್ದರು. ಹೀಗಾಗಿ ಅವರನ್ನು ಡಬ್ಲ್ಯುಎಫ್‌ಐ ಅಮಾನತು ಮಾಡಿತ್ತು.
ಅಶಿಸ್ತಿಗೆ ಶಿಕ್ಷೆ ವಿಧಿಸಿದ್ದ ಡಬ್ಲ್ಯೂಎಫ್ಐ
ವಿನೇಶ್ ಒಲಿಂಪಿಕ್ಸ್ನಲ್ಲಿ ಭಾರತೀಯ ಕುಸ್ತಿಪಟುಗಳೊಂದಿಗೆ ವಾಸ್ತವ್ಯ ಹೂಡಲು ಮತ್ತು ತರಬೇತಿ ನಡೆಸಲು ನಿರಾಕರಿಸಿದ್ದರು. ಜೊತೆಗೆ ಒಲಿಂಪಿಕ್ಸ್ ಅಧಿಕೃತ ಪ್ರಾಯೋಜಕರು ನೀಡಿದ್ದ ಜೆರ್ಸಿಯ ಬದಲಾಗಿ ತಮ್ಮ ವೈಯಕ್ತಿಕ ಪ್ರಯೋಜಕರ ಜರ್ಸಿಯನ್ನು ತೊಟ್ಟು ಅಶಿಸ್ತು ಪ್ರದರ್ಶಿಸಿದ್ದರು. ಈ ಕಾರಣದಿಂದ ಅವರನ್ನು ಅಮಾನತುಗೊಳಿಸಿದ್ದ ಒಕ್ಕೂಟ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅವಕಾಶ ನೀಡದಿರಲು ತೀರ್ಮಾನಿಸಿತ್ತು.
ಕ್ಷಮೆಯಾಚಿಸಿದ್ದ ವಿನೇಶ್
ಆದರೆ, ಈ ಘಟನೆ ಬಳಿಕ ಪ್ರತಿಕ್ರಿಯಿಸಿದ್ದ ವಿನೇಶ್, ಕೊರೊನಾ ಕಾರಣದಿಂದ ಪ್ರತ್ಯೇಕ ವಾಸ್ತವ್ಯ ವ್ಯವಸ್ಥೆ ಕೇಳಿದ್ದೆ ಮತ್ತು ಇನ್ನು ಅಚಾತುರ್ಯದಿಂದ ಪ್ರಾಯೋಜಕರ ಜರ್ಸಿಯ ಬದಲಾಗಿ ಬೇರೆ ಜರ್ಸಿಯನ್ನು ತೊಟ್ಟಿದ್ದೆ ಎಂದು ಕ್ಷಮೆಯಾಚನೆ ಮಾಡಿದ್ದರು.
ಡಬ್ಲ್ಯುಎಫ್‌ಐ ವಿಚಾರಣೆ ಮುಗಿಸಿದ್ದು, ವಿನೇಶ್ ಜೊತೆಗೆ ಕುಸ್ತಿಪಟುಗಳಾದ ಸೋನಂ ಮಲಿಕ್ ಮತ್ತು ದಿವ್ಯಾ ಅವರಿಗೂ ಇನ್ಮುಂದೆ ಅಶಿಸ್ತು ತೋರದಂತೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಇಂತಹ ಘಟನೆ ಮರುಕಳಿಸಿದಲ್ಲಿ ಆಜೀವ ನಿಷೇಧ ಹೇರುವುದಾಗಿ ತಿಳಿಸಿ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಕುಸ್ತಿಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಇದನ್ನು ಓದಿ: ಒಲಿಂಪಿಕ್ಸ್ನಲ್ಲಿ ಪದಕ ಮಿಸ್ ಮಾಡಿಕೊಂಡ 24 ಕ್ರೀಡಾಪಟುಗಳಿಗೆ ಟಾಟಾ ಮೋಟರ್ಸ್ನಿಂದ ಕಾರು ಗಿಫ್ಟ್