ನವದೆಹಲಿ: ಅಮೆರಿಕಾದ ಮಿಚೆಗನ್ನ ಕ್ಲಿಫ್ ಕೀನ್ ರೆಸ್ಲಿಂಗ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿರುವ ಪುರುಷರ 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಪಟು ಭಜರಂಗ್ ಪೂನಿಯಾ ಅವರಿಗೆ ಒಂದು ತಿಂಗಳ ಹೆಚ್ಚುವರಿ ಖರ್ಚಿಗಾಗಿ ಸುಮಾರು 11.65 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವಾರ ನಡೆದ ಮಿಷನ್ ಒಲಿಂಪಿಕ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೂನಿಯಾ ತರಬೇತುದಾರ ಎಮ್ಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಅಮೆರಿಕಾಕ್ಕೆ ತೆರಳಿದ್ದು, ಡಿಸೆಂಬರ್ 4ರಿಂದಲೂ ಅಲ್ಲೇ ತರಬೇತಿ ಪಡೆಯುತ್ತಿದ್ದಾರೆ. ಇದೀಗ ತರಬೇತಿ ಶಿಬಿರ ವಿಸ್ತರಣೆಯಾಗಿದ್ದು, ಅವರು ಫೆಬ್ರವರಿ ಮೊದಲ ವಾರದವರೆಗೆ ಅಲ್ಲೇ ಉಳಿಯಲಿದ್ದಾರೆ.
2019ರ ಸೆಪ್ಟೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪುನಿಯಾ, ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅವರು 2020ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಕೊನೆಯ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪೂನಿಯಾ ತಮ್ಮ ಅಂತಾರಾಷ್ಟ್ರೀಯ ಕುಸ್ತಿಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಮಾತನಾಡಿದ್ದು, ನಾನು ಮಾರ್ಚ್ನಲ್ಲಿ ಆರಂಭವಾಗುವ ರೋಮ್ ರ್ಯಾಂಕಿಂಗ್ ಸಿರೀಸ್ ಮೂಲಕ ಮರಳಲು ಯೋಜಿಸಿದ್ದೇನೆ. ನಂತರ ಕಜಕಿಸ್ತಾನದಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಶಿಪ್ನಲ್ಲೂ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.