ಟೋಕಿಯೊ: ಉದ್ಘಾಟನಾ ಸಮಾರಂಭಕ್ಕೆ ಕೇವಲ 10 ವಾರಗಳಿರುವಾಗ ಜಪಾನ್‌ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಿರೋಷಿಮಾ ಪ್ರಾಂತ್ಯದಲ್ಲಿ ಒಲಿಂಪಿಕ್ ಟಾರ್ಚ್ ರಿಲೇ ಕಾರ್ಯಕ್ರಮ ರದ್ದುಮಾಡಲಾಗಿದೆ.
ಮುಂದಿನ ವಾರ ಹಿರೋಷಿಮಾದಲ್ಲಿ ರಿಲೇ ಇಲ್ಲದೇ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ಗವರ್ನರ್ ಹಿಡೆಹಿಕೊ ಯುಜಾಕಿ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ರಿಲೇ ಮೆರವಣಿಗೆಯ ನಡೆಯುತ್ತಿರುವ ಇದು ಕನಿಷ್ಠ ಆರನೇ ಬದಲಾವಣೆಯಾಗಿದೆ.
ಆದರೆ, ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ರೀತಿಯ ಬದಲಾವಣೆಗಳು ಮತ್ತು ವಿಳಂಬಗಳನ್ನು ನಾವು ಮುಂದೆ ನಿರೀಕ್ಷಿಸಬಹುದು ಎಂದು ರಿಲೇ ಪ್ರಾರಂಭವಾಗುವ ಮೊದಲೇ ಸಂಘಟಕರು ಎಚ್ಚರಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
" ನಾವೆಲ್ಲರೂ ಹೆಚ್ಚಿನ ಕ್ರೀಡಾಪಟುಗಳೊಂದಿಗೆ ಹೊರ ಹೋಗುವುದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದರಿಂದ ಸಾರ್ವಜನಿಕ ಬೀದಿಗಳಲ್ಲಿ ಯಾವುದೇ ರಿಲೇ ಸಾಧ್ಯವಿಲ್ಲ. ಜೊತೆಗೆ ರಿಲೇ ಇಲ್ಲದೇ ಕಾರ್ಯಕ್ರಮಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ಸಂಘಟಕರೊಂದಿಗೆ ಚರ್ಚಿಸಲಾಗುತ್ತಿದೆ" ಎಂದು ಯುಜಾಕಿ ಸೋಮವಾರ ಹೇಳಿದ್ದಾರೆ.
ಟಾರ್ಚ್ ರಿಲೇ ಮಾರ್ಚ್ 25 ರಂದು ಈಶಾನ್ಯ ಜಪಾನ್‌ನಲ್ಲಿ ಪ್ರಾರಂಭವಾಗಿತ್ತು. ಇದು ಜುಲೈ 23 ರಂದು ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಕೊನೆಗೊಳ್ಳಲಿದೆ. ಒಲಿಂಪಿಕ್ ನಡೆಯುವ ಸ್ಥಳವಾದ ಟೋಕಿಯೋ ಮೇ 31ರವರೆಗೂ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಇದು ಒಲಿಂಪಿಕ್ಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.