ಬಾಸೆಲ್, ಸ್ವಿಟ್ಜರ್ಲೆಂಡ್ : ಭಾರತದ ಷಟ್ಲರ್ ಕಿದಾಂಬಿ ಶ್ರೀಕಾಂತ್ ಸ್ವಿಟ್ಜರ್ಲೆಂಡ್ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ. ಸೇಂಟ್ ಜಾಕೋಬ್‌ಶಲ್ಲೆಯ ಅಂಕಣ 1ರಲ್ಲಿ 55 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ 21-18, 7-21, 13-21 ಸೆಟ್‌ಗಳಿಂದ ಶ್ರೀಕಾಂತ್ ಸೋಲನ್ನಪ್ಪಿಕೊಂಡಿದ್ದಾರೆ. ಮೊದಲ ಸೆಟ್ನಲ್ಲಿ ಗೆದ್ದರೂ, ಎರಡು ಮತ್ತು ಮೂರನೇ ಸೆಟ್ನಲ್ಲಿ ಕಿಡಂಬಿ ಶ್ರೀಕಾಂತ್ ಗೆಲ್ಲಲು ಸಾಧ್ಯವಾಗಲಿಲ್ಲ.
ಈಗ ಜೊನಾಟನ್ ಕ್ರಿಸ್ಟಿ ಅವರು ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ ಪ್ರಣೋಯ್ ಎಚ್‌ಎಸ್ ಅವರನ್ನು ಎದುರಿಸಲಿದ್ದಾರೆ. ಪ್ರಣೋಯ್ ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಅವರನ್ನು 21-19, 19-21, 21-18 ಸೆಟ್‌ಗಳಿಂದ ಸೋಲಿಸಿದ್ದಾರೆ. ಪ್ರಣೋಯ್ ಹೊರತಾಗಿ ಪಿವಿ ಸಿಂಧು ಅವರು ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್ ವಿರುದ್ಧ 21-18, 15-21, 21-19 ಸೆಟ್ಗಳ ಅಂತರದಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದಾರೆ. ಸುಮಾರು 79 ನಿಮಿಷಗಳ ಹೋರಾಟದಲ್ಲಿ ಪಿ.ವಿ.ಸಿಂಧು ಗೆದ್ದು, ಫೈನಲ್ ಪ್ರವೇಶಿಸಲಿದ್ದಾರೆ.
ಭಾನುವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಪಿ.ವಿ.ಸಿಂಧು ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಎದುರಿಸಲಿದ್ದಾರೆ. ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಮತ್ತು ಭಾರತದ ಪ್ರಣೋಯ್ ಅವರ ಫೈನಲ್ ಪಂದ್ಯವೂ ಭಾನುವಾರ ನಡೆಯಲಿದೆ.
ಇದನ್ನೂ ಓದಿ: 'ಶಾಬಾಶ್ ಮಿಥು'! ವನಿತೆಯರ ಏಕದಿನ ವಿಶ್ವಕಪ್ನಲ್ಲಿ ಹೊಸ ದಾಖಲೆ