ನವದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ಡೇವಿಸ್ ಕಪ್‌ಗೆ ಹೋಗುವುದಿಲ್ಲ ಎಂದು ಭಾರತದ ಅಗ್ರ ಟೆನಿಸ್ ಸಿಂಗಲ್ಸ್ ಆಟಗಾರರಾದ ಸುಮಿತ್ ನಾಗಲ್ ಮತ್ತು ಸಸಿಕುಮಾರ್ ಮುಕುಂದ್ ರಾಷ್ಟ್ರೀಯ ಟೆನಿಸ್ ಫೆಡರೇಶನ್‌ಗೆ ತಿಳಿಸಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಆಟಗಾರರ ನಿರಾಕರಣೆಯ ಬಗ್ಗೆ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದೆ.
ಎಟಿಪಿ ರ್ಯಾಂಕಿಂಗ್ನಲ್ಲಿ 141ನೇ ಸ್ಥಾನ ಪಡೆದಿರುವ ಸುಮಿತ್ ನಾಗಲ್ ಭಾರತದ ಅತ್ಯುತ್ತಮ ಶ್ರೇಯಾಂಕದ ಸಿಂಗಲ್ಸ್ ಆಟಗಾರರಾಗಿದ್ದಾರೆ. 477ನೇ ಸ್ಥಾನದಲ್ಲಿರುವ ಮುಕುಂದ್ ಎರಡನೇ ಅತ್ಯುತ್ತಮರಾಗಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಗುಂಪು-1ರ ಪ್ಲೇಆಫ್ ಪಂದ್ಯಗಳಿಗೆ ಇಬ್ಬರು ಆಟಗಾರರು ತಮ್ಮ ಅಲಭ್ಯತೆ ಬಗ್ಗೆ ತಿಳಿಸಿದ್ದಾರೆ. ಆದರೆ, ಅವರ ಈ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣ ನೀಡಿಲ್ಲ.
ಸುಮಿತ್ ನಾಗಲ್ ತಮ್ಮ ಆಟದ ಶೈಲಿಗೆ ಹೊಂದಿಕೆಯಾಗದ ಗ್ರಾಸ್ ಕೋರ್ಟ್‌ಗಳಲ್ಲಿ ಪಂದ್ಯ ನಡೆಯುವುದರಿಂದ ಅವರು ಆಡಲು ಬಯಸುತ್ತಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗೆ ತಮ್ಮನ್ನು ಪರಿಗಣಿಸಬಾರದು ಎಂದು ನಾಗಲ್ ಬಹಳ ಹಿಂದೆಯೇ ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದರು. ಮತ್ತೊಂದೆಡೆ, ವೈಯಕ್ತಿಕ ಕಾರಣಗಳಿಂದ ಮುಕುಂದ್ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.
ಇಂತಹ ಸನ್ನಿವೇಶದಲ್ಲಿ ಭಾರತವನ್ನು ರಾಮ್‌ಕುಮಾರ್ ರಾಮನಾಥನ್ ಮುನ್ನಡೆಸಬೇಕಾಗಿದೆ. ತಮ್ಮ ಸರ್ವ್ ಮತ್ತು ವಾಲಿ ಶೈಲಿಯೊಂದಿಗೆ ಇವರು ಪಂದ್ಯಗಳಿಗೆ ಹೆಚ್ಚು ಸೂಕ್ತ ಆಟಗಾರರಾಗಿದ್ದಾರೆ. ಜೊತೆಗೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೊರಾಕೊ ವಿರುದ್ಧ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿದ್ದ ದಿಗ್ವಿಜಯ್ ಪ್ರತಾಪ್ ಸಿಂಗ್ ಭಾರತದ ಮುಂದಿನ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಇದರಲ್ಲಿ ಗೆದ್ದವರು 2024ರ ವಿಶ್ವ ಗುಂಪು -1ರಲ್ಲಿ ಸ್ಥಾನ ಪಡೆಯುತ್ತಾರೆ. ಭಾರತದ ಅನುಭವಿ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಈಗಾಗಲೇ ನಿವೃತ್ತ ಹೊಂದಿದ್ದಾರೆ.
ಆಟಗಾರರ ನಿರ್ಧಾರದಿಂದ ಎಐಟಿಎ ಅತೃಪ್ತಿ: ರಾಷ್ಟ್ರೀಯ ಕರ್ತವ್ಯದ ವಿಷಯ ಬಂದಾಗ ಆಟಗಾರರು ಎರಡು ಬಾರಿ ಯೋಚಿಸಬಾರದು ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ಹೇಳಿದ್ದಾರೆ. ಅಲ್ಲದೇ. ಇದು ತಪ್ಪು. ಇದು ದೇಶಕ್ಕೆ ಸೇವೆ ಸಲ್ಲಿಸುವ ಪ್ರಶ್ನೆಯಾಗಿರುವಾಗ ನೀವು ಅದನ್ನು ಏಕೆ ಮಾಡಬಾರದು?, ಭಾರತವನ್ನು ಪ್ರತಿನಿಧಿಸಲು ಬಯಸಿದರೆ ಅವರಿಗೆ ಯಾವುದೇ ಆಯ್ಕೆ ಇಲ್ಲ. ನಾನು ಈ ವಿಷಯವನ್ನು ಕಾರ್ಯಕಾರಿ ಸಮಿತಿಯ ಮುಂದೆ ಇರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಆಟಗಾರರು ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಗಾಯಗೊಂಡಿದ್ದರೆ ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಮುಕುಂದ್ ತನ್ನನ್ನು ರಾಷ್ಟ್ರೀಯ ಕರ್ತವ್ಯಕ್ಕೆ ಅಲಭ್ಯಗೊಳಿಸಿದ್ದು ಇದೇ ಮೊದಲಲ್ಲ. ಅವರು ಅದನ್ನೇ ಎರಡು ಬಾರಿ ಮಾಡಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದರು.
ಡೇವಿಸ್ ಕಪ್ನ ಪಂದ್ಯಗಳನ್ನು ಪಾಕಿಸ್ತಾನದಿಂದ ಬೇರೆಡೆ ಸ್ಥಳಾಂತರದ ಬಗ್ಗೆ ಭಾರತ ಪ್ರಯತ್ನಿಸುತ್ತಿದೆ. ಆದರೆ, ಡೇವಿಸ್ ಕಪ್ ಸಮಿತಿಯು ಈಗಾಗಲೇ ಎಐಟಿಎ ಮನವಿಯನ್ನು ತಿರಸ್ಕರಿಸಿದೆ. ಈ ಕುರಿತ ಧುಪರ್ ಪ್ರತಿಕ್ರಿಯಿಸಿ, ಡೇವಿಸ್ ಕಪ್ ಸಮಿತಿಯು ನಮ್ಮ ಪ್ರಸ್ತಾಪವನ್ನು ತಿರಸ್ಕರಿಸಿದೆ. ನಾವು ಈಗ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದೇವೆ. ನಾವು ಪಾಕಿಸ್ತಾನಕ್ಕೆ ಹೋಗಬೇಕಾದರೆ, ಹೋಗುತ್ತೇವೆ. ಇದಕ್ಕಾಗಿ ಚೆನ್ನಾಗಿ ತಯಾರಿ ಮಾಡುತ್ತೇವೆ ಎಂದು ಹೇಳಿದರು.
ಪಾಕಿಸ್ತಾನ ಹೇಳಿದ್ದೇನು?: ಪಾಕಿಸ್ತಾನ ಟೆನಿಸ್ ಫೆಡರೇಶನ್ (ಪಿಟಿಎಫ್) ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್ ಮಾತನಾಡಿ, ಭಾರತ ತಂಡ ನಮಗಿಂತ ಉತ್ತಮವಾಗಿದೆ. ಭಾರತೀಯರು ಬಂದರೆ, ನಾವು ಉತ್ತಮ ನೆರೆಹೊರೆಯವರು ಎಂಬ ಸಂದೇಶ ರವಾನೆಯಾಗುತ್ತದೆ. ಅವರು ಪಾಕಿಸ್ತಾನಕ್ಕೆ ಬರದಿರುವುದು ಸರಿಯಲ್ಲ ಎಂದಿದ್ದಾರೆ.
1964ರಲ್ಲಿ ಭಾರತೀಯ ಡೇವಿಸ್ ಕಪ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿತ್ತು. ಪಾಕಿಸ್ತಾನ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದೆ. ಉಭಯ ದೇಶಗಳ ನಡುವಿನ ಎಂಟು ಡೇವಿಸ್ ಕಪ್ ಟೂರ್ನಿಗಳಲ್ಲಿ ಭಾರತ ಎಂದಿಗೂ ಸೋತಿಲ್ಲ. ಈ ಬಾರಿ ಭಾರತ ಪ್ರವಾಸ ಮಾಡಲು ನಿರ್ಧರಿಸಿದರೆ, 59 ವರ್ಷಗಳಲ್ಲಿ ಗಡಿಯಾಚೆಗಿನ ಮೊದಲ ಭೇಟಿ ಇದಾಗಲಿದೆ.
ಇದನ್ನೂ ಓದಿ: ವಿಜಯ್ ಮರ್ಚೆಂಟ್ ಟ್ರೋಫಿ: U-16 ಕರ್ನಾಟಕಕ್ಕೆ ದ್ರಾವಿಡ್ ಪುತ್ರ ನಾಯಕ, ರಾಯಚೂರು ಹುಡುಗ ಉಪನಾಯಕ