ಭುವನೇಶ್ವರ: ಯಾರಿಗೂ ಬೇಡವಾಗಿದ್ದ ಹಾಕಿ ಕ್ರೀಡೆಗೆ ಪುನರ್ಜನ್ಮ ನೀಡಿದ್ದ ಒಡಿಶಾ ಸರ್ಕಾರ ಇದೀಗ ಕ್ರೀಡಾಕ್ಷೇತ್ರಕ್ಕೆ ಮತ್ತೊಂದು ಭರ್ಜರಿ ಕೊಡುಗೆ ನೀಡುತ್ತಿದೆ. ಬರೋಬ್ಬರಿ 693.35 ಕೋಟಿ ರೂಪಾಯಿ ವೆಚ್ಛದಲ್ಲಿ 89 ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಳನ್ನು ರಾಜ್ಯಾದ್ಯಂತ ನಿರ್ಮಿಸುವ ಹೊಸ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಅವುಗಳನ್ನು 5ಟಿ ಉಪಕ್ರಮಗಳ ಅಡಿ ಜಾರಿಗೊಳಿಸಲು ನಿರ್ಧಿಸಿದ್ದಾರೆ.
ಒಡಿಶಾದ ನಗರ ಪ್ರದೇಶಗಳಲ್ಲಿ 89 ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲು ರಾಜ್ಯ ಸರ್ಕಾರವು 693.35 ಕೋಟಿಗಳನ್ನು ವಿನಿಯೋಗಿಸುತ್ತಿದೆ ಎಂದು ಕ್ರೀಡಾ ಸಚಿವೆ ತುಷಾರಕಾಂತಿ ಬೆಹೆರಾ ಸೋಮವಾರ ತಿಳಿಸಿದ್ದಾರೆ. ಜೊತೆಗೆ ಇವುಗಳನ್ನು ಸೈಕ್ಲೋನ್ ಸೆಂಟರ್, ಕಾನ್ಫರೆನ್ಸ್ ಹಾಲ್ ಆಗಿಯೂ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ರೀಡೆಗೆ ಉತ್ತೇಜನ ನೀಡುವುದು, ಪ್ರವಾಹ, ಸೈಕ್ಲೋನ್ ಸಂದರ್ಭದಲ್ಲಿ ನಿರಾಶ್ರಿತರಿಗೆ ಸೂರು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸುವುದು (50/100-ಹಾಸಿಗೆ ಆಸ್ಪತ್ರೆಗಳು) ಇದರ ಗುರಿಯಾಗಿದೆ. ಒಡಿಶಾ ಕ್ಯಾಬಿನೆಟ್ ಇಂದು ಅನುಮೋದಿಸಿದ ಈ 89 ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣದ ಯೋಜನೆ ತ್ರಿವಳಿ (ಕ್ರೀಡೆ, ಪ್ರವಾಹ ಮತ್ತು ಸಾಂಕ್ರಾಮಿಕ) ಗುರಿಗಳನ್ನು ಪೂರೈಸುತ್ತದೆ ಎಂದು ಬೆಹೆರಾ ತಿಳಿಸಿದ್ದಾರೆ.
ಬಹುಪಯೋಗಿ ಕ್ರೀಡಾಂಗಣ
ಈ ಯೋಜನೆ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಾಂಕ್ರಾಮಿಕ ಕಾಲದಲ್ಲಿ ಆಸ್ಪತ್ರೆ, ಪ್ರವಾಹದ ಸಂದರ್ಭದಲ್ಲಿ ಸೂರು ಕಳೆದುಕೊಂಡವರಿಗೆ ನೆಲೆಯಾಗಿ ಈ ಕ್ರೀಡಾಂಗಣಗಳನ್ನು ಬದಲಾಯಿಸಲು ಸಾಧ್ಯವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಉಳಿದ ಸಮಯದಲ್ಲಿ ಕ್ರೀಡಾಪಟುಗಳಿಗೆ ತರಬೇತಿ, ಸಭೆಗಳು ಮತ್ತು ಪರೀಕ್ಷಾ ಕೇಂದ್ರಗಳಾಗಿಯೂ ಇವುಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
ನವೀನ್ ಪಟ್ನಾಯಕ್ ಸರ್ಕಾರ ಭಾರತ ಪುರುಷ ಮತ್ತು ಮಹಿಳಾ ಹಾಕಿ ತಂಡದ ಪ್ರಾಯೋಜಕರಾಗಿದ್ದಾರೆ. 2018ರಲ್ಲಿ ಭಾರತದಲ್ಲಿ ವಿಶ್ವಕಪ್ ಆಯೋಜನೆ ಜವಾಬ್ದಾರಿಯನ್ನು ಒಡಿಶಾ ಅತ್ಯುತ್ತಮವಾಗಿ ಆಯೋಜಿಸಿತ್ತು. ಕ್ರಿಕೆಟ್ ಪ್ರೇಮಿ ರಾಷ್ಟ್ರದಲ್ಲಿ ತಿರಸ್ಕಾರಕ್ಕೊಳಪಟ್ಟಿದ್ದ ಹಾಕಿ ಕ್ರೀಡೆಗಾಗಿ ಸುಮಾರು 150 ಕೋಟಿ ರೂಗಳಷ್ಟು ಖರ್ಚು ಮಾಡಿರುವ ಪಟ್ನಾಯಕ್ ಸರ್ಕಾರ ಮುಂದೆಯೂ ಕ್ರೀಡೆಗೆ ಬೆಂಬಲ ನೀಡುವ ಸಲುವಾಗಿ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ಇದನ್ನು ಓದಿ: ಒಡಿಶಾದ ರೋರ್ಕೆಲಾದಲ್ಲಿ ಅತಿ ದೊಡ್ಡ ಹಾಕಿ ಸ್ಟೇಡಿಯಂ ನಿರ್ಮಾಣ: ನವೀನ್ ಪಟ್ನಾಯಕ್ ಘೋಷಣೆ