ಮನಿಲ(ಫಿಲಿಫೈನ್ಸ್): ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರು. ಭಾರತದ ಅನುಭವಿ ಶಟ್ಲರ್ ತಮಗಿಂತ ಕೆಳಗಿನ ಶ್ರೇಯಾಂಕದ ಸಿಂಗಾಪುರ್ನ ಯು ಯಾನ್ ಜಸ್ಲಿನ್ ಹೂಯಿ ವಿರುದ್ಧ ಗುರುವಾರ ನೇರ ಗೇಮ್ಗಳ ಜಯ ಸಾಧಿಸಿದ್ದಾರೆ. 2014ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿರುವ ಭಾರತೀಯ ಶಟ್ಲರ್, 100ನೇ ಶ್ರೇಯಾಂಕದ ಜಾಸ್ಲಿನ್ ಹೂಯಿ ವಿರುದ್ಧ 42 ನಿಮಿಷಗಳ ಕಾಲ ನಡೆದ ಪಂದ್ಯವನ್ನು 21-16-21-16ರ ನೇರ ಗೇಮ್ಗಳ ಅಂತರದಲ್ಲಿ ವಿಜಯಿಯಾದರು.
ಮುಂದಿನ ಸುತ್ತಿನಲ್ಲಿ ಹೈದರಾಬಾದ್ ಶಟ್ಲರ್, ಟೋಕಿಯೋ ಒಲಿಂಪಿಕ್ಸ್ನಲ್ಲಿ ತಾವೇ ಮಣಿಸಿ ಕಂಚು ಗೆದ್ದಿದ್ದ 3ನೇ ಶ್ರೇಯಾಂಕದ ಚೀನಾದ ಬಿಂಗ್ ಜಿಯಾವ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಬಿಂಗ್ ಜಿಯಾವ್ ವಿರುದ್ಧ ಸಿಂಧು 7-9ರ ಮುಖಾಮುಖಿ ದಾಖಲೆ ಹೊಂದಿದ್ದಾರೆ. ಆದರೆ ಕಳೆದ 2 ಮುಖಾಮುಖಿಯಲ್ಲಿ ಸಿಂಧು ಜಯ ಸಾಧಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ವಿಶ್ವದ 7ನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 21-17-21-15ರಲ್ಲಿ ಜಪಾನ್ ಅಕಿರಾ ಕೋಗ ಮತ್ತು ತೈಚಿ ಸೈಟೋ ವಿರುದ್ಧ ಗೆಲುವು ಸಾಧಿಸಿದರು. ಭಾರತೀಯ ಜೋಡಿ 8ರ ಘಟ್ಟದಲ್ಲಿ ಮಲೇಷ್ಯಾದ ಅರೋನ್ ಚಿಯಾ ಮತ್ತು ಸೋ ವೂಯಿ ಅಥವಾ ಸಿಂಗಾಪುರ್ನ ಡ್ಯಾನಿ ಬಾವಾ ಕ್ರಿಸ್ನಾಂಟಾ ಮತ್ತು ಜುನ್ ಲಿಯಾಂಗ್ ಆ್ಯಂಡಿ ಕ್ವೆಕ್ ವಿರುದ್ಧ ಸೆಣಸಾಡಲಿದ್ದಾರೆ.
4ನೇ ಪ್ರಶಸ್ತಿ ಪಡೆಯುವ ಆಸೆಯಲ್ಲಿ ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು. ಭಾರತದ ಅನುಭವಿ ಶಟ್ಲರ್ ಚೀನಾದ 22 ವರ್ಷದ ವಾಂಗ್ ಝಿ ಯಿ ವಿರುದ್ಧ 21-12, 7-21,13-21ರಿಂದ ಸೋಲುಕಂಡು ಟೂರ್ನಿಯಿಂದ ಹೊರಬಿದ್ದರು. ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಕೂಡ 16-21, 21-16,17-21ರಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಸೋಲನುಭವಿಸಿದರು.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸೀಮಿತ ಓವರ್ಗಳ ಸರಣಿಗೆ ಉಮ್ರಾನ್ಗೆ ಅವಕಾಶ ಕೊಡಿ: ಗವಾಸ್ಕರ್