ನವದೆಹಲಿ: ನ್ಯಾಷನಲ್ ಶೂಟಿಂಗ್ ಟ್ರಯಲ್ಸ್‌ನಲ್ಲಿ ಶೂಟರ್ ಸೌರಭ್ ಚೌಧರಿ ಮೂರು ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ 50 ಮೀಟರ್ ಪಿಸ್ತೂಲ್ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಸೌರಭ್ ಚೌಧರಿ ಪಡೆದುಕೊಂಡಿದ್ದಾರೆ. ಐದನೇ ದಿನದ ಪಿಸ್ತೂಲ್ ಈವೆಂಟ್ನ ಮೂರು ಮತ್ತು ನಾಲ್ಕನೇ ಟ್ರಯಲ್ ನಡೆದಿದ್ದು, ಟಿ4 ಟ್ರಯಲ್ನ 50 ಮೀಟರ್ ಶೂಟಿಂಗ್ನಲ್ಲಿ ಸೌರಭ್ ಚೌಧರಿ ಜೂನಿಯರ್ ಮತ್ತು ಹಿರಿಯರ ವಿಭಾಗದಲ್ಲಿ ಚಿನ್ನ ಗಳಿಸಿದ್ದಾರೆ. ಪುರುಷರ ಟಿ3 ಟ್ರಯಲ್ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಟೋಕಿಯೊ ಒಲಿಂಪಿಕ್ ಫೈನಲಿಸ್ಟ್ ಆಗಿದ್ದ ಉತ್ತರ ಪ್ರದೇಶದ ಸೌರಭ್ ಚೌಧರಿ, ಟಿ4 ಟ್ರಯಲ್ನ 60 ಶೂಟ್ಗಳ ಸರಣಿಯಲ್ಲಿ 562 ಸ್ಕೋರ್ ಗಳಿಸಿದ್ದರು. ಈ ಮೂಲಕ ಭಾರತೀಯ ನೌಕಾಪಡೆಯಿಂದ ಸ್ಪರ್ಧಿಸಿ 555 ಸ್ಕೋರ್ ಪಡೆದಿದ್ದ ಕುನಾಲ್ ರಾಣಾ ಅವರನ್ನು ಹಿಂದಿಕ್ಕಿದರು. ಜೂನಿಯರ್ ಪುರುಷರ ಸ್ಪರ್ಧೆಯಲ್ಲಿ ಅದೇ ಸ್ಕೋರ್ ಅನ್ನು ಸೌರಭ್ ಚೌಧರಿ ಪಡೆದಿದ್ದು, ಪಂಜಾಬ್‌ನ ಅರ್ಜುನ್ ಸಿಂಗ್ ಚೀಮಾ ಅವರು 547 ಸ್ಕೋರ್ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಸೌರಭ್ ಈ ಹಿಂದೆ ಪುರುಷರ ಟಿ3 ಸ್ಪರ್ಧೆಯಲ್ಲಿ ವಾಯುಪಡೆಯಿಂದ ಬಂದಿದ್ದ ಅನುಭವಿ ಗೌರವ್ ರಾಣಾ ಮತ್ತು ರಾಜಸ್ಥಾನದ ಸ್ಪರ್ಧಿ ಓಂ ಪ್ರಕಾಶ್ ಮಿಥೆರ್ವಾಲ್ ನಂತರ ಮೂರನೇ ಸ್ಥಾನ ಪಡೆದಿದ್ದರು.
ಗೌರವ್ ರಾಣಾ 553 ಸ್ಕೋರ್ ಪಡೆದು ಚಿನ್ನ ಗಳಿಸಿದರೆ, ಓಂ ಪ್ರಕಾಶ್ 553 ಸ್ಕೋರ್ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಸೌರಭ್ 552 ಸ್ಕೋರ್ನೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಭಾನುವಾರ ಸಂಜೆ ಪಂಜಾಬ್‌ನ ವಿಜಯವೀರ್ ಸಿಧು ಅವರು ಜೂನಿಯರ್ ಪುರುಷರ ರ್ಯಾಪಿಡ್ ಫೈರ್ ಪಿಸ್ತೂಲ್ ಟಿ3 ಟ್ರಯಲ್ಸ್‌ನಲ್ಲಿ ಹರಿಯಾಣದ ಅನೀಶ್ ಮತ್ತು ಆದರ್ಶ್ ಸಿಂಗ್ ಅವರ ವಿರುದ್ಧ ಗೆದ್ದರು. ಅವರಿಬ್ಬರೂ ಈಗ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಡುಪ್ಲೆಸಿ ಕೆಚ್ಚೆದೆಯ ಬ್ಯಾಟಿಂಗ್, ಬೌಲರ್ಗಳ ಮಿಂಚು: ಲಖನೌ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್