ಅಲ್ಮಾಟಿ(ಕಜಕಿಸ್ತಾನ): ಹಾಲಿ ಚಾಂಪಿಯನ್ ಸರಿತಾ ಮೊದಲ ಸುತ್ತಿನ ಪಂದ್ಯದ ಸೋಲಿನ ನಂತರವೂ ಆಕರ್ಷಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ 59 ಕೆಜಿ ವಿಭಾಗದಲ್ಲಿ ಏಷ್ಯನ್ ಚಾಂಪಿಯನ್ಶಿಪ್ ಫೈನಲ್ ತಲುಪಿದ್ದಾರೆ. ಪೂಜಾ(76) ಮತ್ತು ಸೀಮಾ ಬಸ್ಲಾ(50ಕೆಜಿ) ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು, ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.
ನವದೆಹಲಿಯಲ್ಲಿ 2020ರ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದ ಸರಿತಾ ಮೊದಲ ಸುತ್ತಿನ ಪಂದ್ಯದಲ್ಲಿ ಮಂಗೋಲಿಯಾದ ಶೂಡೋರ್ ಬಾತರ್ಜಾವ್ ವಿರುದ್ಧ 4-5ರಲ್ಲಿ ಸೋಲು ಕಂಡಿದ್ದರು. ಆದರೆ ತಮ್ಮ ಮುಂದಿನ ಸುತ್ತಿನಲ್ಲಿ ಬಲಿಷ್ಠರಾಗಿ ಹಿಂತಿರುಗಿ ಕಜಕಿಸ್ತಾನದ ದಿಯಾನ ಕಯುಮೋವಾ ಅವರನ್ನು ಮಣಿಸಿದ್ದರು.
ಸೆಮಿಫೈನಲ್ನಲ್ಲಿ ಕಿರ್ಗಿಸ್ತಾನದ ನುರೈದಾ ಅನರ್ಕುಲೊವಾ ವಿರುದ್ಧ ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ತೋರಿ ಕೇವಲ 90 ಸೆಕೆಂಡ್ಗಳಲ್ಲೇ ಪಂದ್ಯವನ್ನು ಗೆದ್ದುಕೊಂಡರು. ಇದೀಗ ಮತ್ತೆ ಮೊದಲ ಸುತ್ತಿನಲ್ಲಿ ತಮ್ಮನ್ನು ಮಣಿಸಿದ್ದ ಶೂಡೋರ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಮಂಗೋಲಿನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಆದರೆ 50 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದ ಸೀಮಾ ಉಜ್ಬೇಕಿಸ್ತಾನ್‌ನ ಜಾಸ್ಮಿನಾ ಇಮ್ಮೇವಾ ವಿರುದ್ಧ 2-3ರಲ್ಲಿ ಸೋಲು ಕಂಡರು. ಇದೀಗ ಕಂಚಿನ ಪದಕಕ್ಕಾಗಿ ತೈಪೆಯ ಯುಂಗ್ ಹ್ಸುನ್ ಲಿನ್ ಸವಾಲನ್ನು ಎದುರಿಸಲಿದ್ದಾರೆ. 76 ಕೆಜಿ ವಿಭಾಗದಲ್ಲಿ ಪೂಜಾ ಕೂಡ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು, ಇದೀಗ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.