ಬೆಂಗಳೂರು: ಭರ್ತಿಯಾಗಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳ ನಿರೀಕ್ಷೆ ಈಡೇರಿದೆ. ಶನಿವಾರ ರಾತ್ರಿ ಇಲ್ಲಿ ನಡೆದ ಸ್ಯಾಫ್ ಚಾಂಪಿಯನ್ಶಿಪ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಫುಟ್ಬಾಲ್ ತಂಡ ಲೆಬನಾನ್ ಅನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಮಣಿಸಿ 13ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಈ ಮೂಲಕ 9ನೇ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ.
ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮದಗಜಗಳಂತೆ ಹೋರಾಟ ನಡೆಸಿದವು. ನಿಗದಿತ 90 ನಿಮಿಷಗಳಲ್ಲಿ ಇತ್ತಂಡಗಳು ಒಂದೇ ಒಂದು ಗೋಲು ದಾಖಲಿಸಲಿಲ್ಲ. ಹೆಚ್ಚುವರಿ ಸಮಯದಲ್ಲೂ ಗೋಲು ಬರಲೇ ಇಲ್ಲ. 120 ನಿಮಿಷಗಳ ಗೋಲುರಹಿತ ಆಟದಿಂದಾಗಿ ಕೊನೆಗೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಭಾರತ ತನ್ನ ಅದ್ಭುತ ಕಾಲ್ಚಳಕ ಪ್ರದರ್ಶಿಸಿ 4-2ರಿಂದ ಪಂದ್ಯ ಗೆದ್ದು ಸಂಭ್ರಮಾಚರಣೆ ಮಾಡಿತು.
ಗೋಲು ರಹಿತ ಆಟ: ಪಂದ್ಯಾರಂಭದಲ್ಲಿ ಲೆಬನಾನ್ ಉತ್ತಮ ಪ್ರದರ್ಶನ ನೀಡಿತು. ಚೆಂಡಿನ ಮೇಲೆ ಹಿಡಿತ ಸಾಧಿಸಿ ಗೋಲು ಗಳಿಸಲು ಹಲವು ಪ್ರಯತ್ನಗಳನ್ನು ನಡೆಸಿತು. ಮೊದಲ 10 ನಿಮಿಷ ಭಾರತ ಚೆಂಡನ್ನೇ ಪಡೆದಿರಲಿಲ್ಲ. 2ನೇ ನಿಮಿಷದಲ್ಲಿ ಲೆಬನಾನ್ ಗೋಲಿಗೆ ಯತ್ನಿಸಿ ವೈಫಲ್ಯ ಕಂಡಿತು. ಇದಾದ ಬಳಿಕ ಎಚ್ಚೆತ್ತು ಹಿಡಿತ ಸಾಧಿಸಿತು. 16ನೇ ನಿಮಿಷದಲ್ಲಿ ಎದುರಾಳಿ ಗೋಲಿನೆಡೆಗೆ ನುಗ್ಗಿ ಗೋಲು ಗಳಿಸಲು ಯತ್ನಿಸಿತಾದರೂ ಫಲ ಸಿಗಲಿಲ್ಲ. ಮೊದಲಾರ್ಧದಲ್ಲಿ ಉಭಯ ತಂಡಗಳು ನಡೆಸಿದ ಹಲವು ಪ್ರಯತ್ನಗಳ ಹೊರತಾಗಿಯೂ ಯಾವುದೇ ಗೋಲು ದಕ್ಕಲಿಲ್ಲ.
ಸುನಿಲ್ ಚೆಟ್ರಿ ಆಟಕ್ಕೆ ಲೆಬನಾನ್ ಬ್ರೇಕ್: ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತ ತಂಡದ ನಾಯಕ ಸುನಿಲ್ ಚೆಟ್ರಿಯನ್ನು ಲೆಬನಾನ್ ಮಹತ್ವದ ಪಂದ್ಯದಲ್ಲಿ ಕಟ್ಟಿ ಹಾಕಿತು. ಪಂದ್ಯದುದ್ದಕ್ಕೂ ಗೋಲು ಗಳಿಸಲು ಚೆಟ್ರಿ ನಡೆಸಿದ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿತು. ಚೆಟ್ರಿ 93ನೇ ಮತ್ತು 95ನೇ ನಿಮಿಷದಲ್ಲಿ ಎರಡು ಬಾರಿ ಗೋಲು ಗಳಿಸಬಹುದಿತ್ತು. ಆದರೆ, ಇದನ್ನು ಲೆಬನಾನ್ ಯಶಸ್ವಿಯಾಗಿ ತಡೆಯಿತು. ದ್ವಿತೀಯಾರ್ಧದಲ್ಲಿಯೂ ಎರಡೂ ತಂಡಗಳಿಗೆ ಯಾವುದೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.
ಶೂಟೌಟ್ ಹೀಗಿತ್ತು...: 120 ನಿಮಿಷ ಆಟ ಮುಗಿದರೂ ಯಾವುದೇ ತಂಡಕ್ಕೆ ಗೋಲು ಸಿಗದ ಕಾರಣ ಪೆನಾಲ್ಟಿ ಶೂಟೌಟ್ ನಡೆಸಲಾಯಿತು. ಭಾರತ ತಂಡ ಸ್ಥಳೀಯ ಅಭಿಮಾನಿಗಳ ಭಾರೀ ಬೆಂಬಲದ ಮಧ್ಯೆ ಶೂಟೌಟ್ಗಿಳಿಯಿತು. ಮೊದಲ ಯತ್ನದಲ್ಲೇ ಭಾರತದ ನಾಯಕ ಸುನಿಲ್ ಚೆಟ್ರಿ ಗೋಲು ಗಳಿಸಿದರು. ಲೆಬನಾನ್ ತಂಡದ ನಾಯಕ ಮಾಟೌಕ್ರ ಯತ್ನವನ್ನು ಭಾರತದ ಗೋಲಿ ಗುರ್ಪ್ರೀತ್ ಸಂಧು ತಡೆದರು.
ಇದರಿಂದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಬಳಿಕ ಅನ್ವರ್ ಅಲಿ, ಮಹೇಶ್ ಸಿಂಗ್ ಮತ್ತು ಉದಾಂತ ಸಿಂಗ್ ಭಾರತಕ್ಕೆ ಗೋಲು ತಂದರು. ಅತ್ತ ಲೆಬನಾನ್ 4 ಪ್ರಯತ್ನಗಳಲ್ಲಿ ವಾಲಿದ್ ಶೌರ್ ಮತ್ತು ಮೊಹಮ್ಮದ್ ಸಾಡೆಕ್ ಮಾತ್ರ ಗೋಲು ಗಳಿಸಿದ್ದರಿಂದ 4-2 ರಲ್ಲಿ ಸೋಲು ಕಂಡರು.ಇತ್ತೀಚೆಗೆ ಒಡಿಶಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ 2-0 ಅಂತರದಿಂದ ಲೆಬನಾನ್ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. ಲೆಬನಾನ್ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ.
ಜುಲೈ 4ರಂದು ಫೈನಲ್ ಪಂದ್ಯ: ಲೆಬನಾನ್ ಮಣಿಸಿ 13ನೇ ಬಾರಿಗೆ ಫೈನಲ್ಗೆ ಬಂದಿರುವ ಬಲಿಷ್ಠ ಭಾರತ ತಂಡ ಜುಲೈ 4 ರಂದು(ಮಂಗಳವಾರ) ಕುವೈತ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಸೆಮಿಫೈನಲ್ಲ್ಲಿ ಕುವೈತ್ ಬಾಂಗ್ಲಾದೇಶವನ್ನು 1-0 ಗೋಲಿನಿಂದ ಸೋಲಿಸಿತ್ತು. 8 ಬಾರಿಯ ಚಾಂಪಿಯನ್ ಭಾರತ 9ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹಿಂದಿನ 13 ಆವೃತ್ತಿಗಳಲ್ಲಿ 8 ಬಾರಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ. 2003ರಲ್ಲಿ ಮಾತ್ರ ಸೆಮಿಫೈನಲ್ ತಲುಪಿರಲಿಲ್ಲ.
ಇದನ್ನೂ ಓದಿ; West Indies Out Of World Cup: ಏಕದಿನ ವಿಶ್ವಕಪ್‌ನಿಂದ ಹೊರ ಬಿದ್ದ ವೆಸ್ಟ್ ಇಂಡೀಸ್.. ಅರ್ಹತೆ ಕಳೆದುಕೊಂಡ ಚಾಂಪಿಯನ್ ತಂಡ