ಸುಳ್ಯ: ಈ ಬಾರಿಯ ಭಾರತ ಕಬಡ್ಡಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಕಬಡ್ಡಿ ಪಟು ಐವರ್ನಾಡು ಗ್ರಾಮದ ಸಚಿನ್ ಪ್ರತಾಪ್. ಉಜಿರೆ ಎಸ್‌ಡಿಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಐವರ್ನಾಡು ಗ್ರಾಮದ ಸಚಿನ್ ಪ್ರತಾಪ್ ಈ ಸಾಧನೆ ಮಾಡಿರುವ ಯುವಕ. ರಾಷ್ಟ್ರೀಯ ಸೀನಿಯರ್ ಕಬಡ್ಡಿ ತಂಡಕ್ಕೆ 36 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದ್ದು, ಅದರಲ್ಲಿ ಸಂಭಾವ್ಯ 12 ಆಟಗಾರರ ಆಯ್ಕೆ ನಡೆದಿದೆ. ಸಚಿನ್ ಪ್ರತಾಪ್ ಏಕೈಕ ಕನ್ನಡಿಗನಾಗಿ ಆಯ್ಕೆಯಾಗಿದ್ದಾರೆ. ಕೆಎಫ್ಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ ಮೂವರು ಮಕ್ಕಳಲ್ಲಿ ಸಚಿನ್ ಪ್ರತಾಪ್ ದ್ವೀತಿಯ ಪುತ್ರ. ಮನೆಯಲ್ಲಿ ಆರ್ಥಿಕ ಬಡತನವಿದ್ದರೂ, ಮನೆಯ ಮೂರು ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಹಿರಿಯ ಸಹೋದರಿ ಶರ್ಮಿಳಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಕಿರಿಯ ಸಹೋದರಿ ಸುಮಾ ಎನ್‌ಎಂಸಿ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡೆಗೆ ಅಷ್ಟೇನು ಪ್ರೋತ್ಸಾಹ ದೊರೆಯದ, ಕ್ರೀಡಾ ತರಬೇತಿ ಸೌಲಭ್ಯ, ಸುಸಜ್ಜಿತ ಕ್ರೀಡಾಂಗಣದ ಸೌಲಭ್ಯದಿಂದ ವಂಚಿತವಾಗಿರುವ ಐವರ್ನಾಡಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿರುವ ಸಚಿನ್ ಇದೀಗ ಉಜಿರೆ ಎಸ್‌ಡಿಎಂ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
10ನೇ ತರಗತಿಯವರೆಗೆ ಖೋ-ಖೋ ಆಟಗಾರನಾಗಿದ್ದ ಸಚಿನ್ ನಂತರದ ದಿನಗಳಲ್ಲಿ ಕಬಡ್ಡಿಯಲ್ಲಿ ತನ್ನ ಪ್ರತಿಭೆ ಹೊರಹಾಕಿದ್ದು, ಈ ವೇದಿಕೆ ಸಿಕ್ಕಿದೆ. ಈಗಾಗಲೇ 50ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿದ್ದು, ಕೆಲವು ದಿನಗಳ ಹಿಂದೆ ಜೈಪುರದಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರೂ, ಪ್ರತಾಪ್ ಎರಡು ಪಂದ್ಯಗಳಲ್ಲಿ “ಅತ್ಯುತ್ತಮ ರೈಡರ್’ ಎನಿಸಿಕೊಂಡಿದ್ದರು.