ನವದೆಹಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಖ್ಯಾತ ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಇದರ ನಡುವೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನಾನಿರತ ಕುಸ್ತಿಪಟುಗಳು ಸಹ ಪಿಟಿ ಉಷಾ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಅನೇಕ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಐಒಎ ಅಧ್ಯಕ್ಷೆ ಪಿಟಿ ಉಷಾ, ''ಲೈಂಗಿಕ ಕಿರುಕುಳ ಆರೋಪ ಸಂಬಂಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಮಿತಿಯನ್ನು ಹೊಂದಿದೆ. ಬೀದಿಗೆ ಹೋಗುವ ಬದಲು ಪಕುಸ್ತಿಪಟುಗಳು ನಮ್ಮ ಬಳಿಗೆ ಬರಬಹುದಿತ್ತು. ಆದರೆ, ಅವರು ಅಸೋಸಿಯೇಷನ್ಗೆ ಸಂಪರ್ಕಿಸಿಲ್ಲ. ಇದು ಕುಸ್ತಿಪಟುಗಳಿಗೆ ಮಾತ್ರವಲ್ಲ ಕ್ರೀಡೆಗೆ ಒಳ್ಳೆಯದಲ್ಲ. ಸ್ವಲ್ಪ ಶಿಸ್ತು ಇರಬೇಕು'' ಎಂದು ಹೇಳಿಕೆ ನೀಡಿದ್ದಾರೆ.
ಪಿಟಿ ಉಷಾ ಹೇಳಿಕೆಗೆ ಅತೃಪ್ತಿ: ರಾಜ್ಯಸಭಾ ಸದಸ್ಯರಾದ ಐಒಎ ಅಧ್ಯಕ್ಷೆ ಪಿಟಿ ಉಷಾ ಅವರ ಈ ಹೇಳಿಕೆಗೆ ಪ್ರತಿಭಟನಾನಿರತ ಕುಸ್ತಿಪಟುಗಳು ಅತೃಪ್ತಿ ಹೊರಹಾಕಿದ್ದಾರೆ. ''ಮಹಿಳಾ ಅಥ್ಲೀಟ್ ಆಗಿರುವ ಪಿಟಿ ಉಷಾ ಅವರು ಇತರ ಮಹಿಳಾ ಅಥ್ಲೀಟ್‌ಗಳ ಮಾತನ್ನು ಆಲಿಸುತ್ತಿಲ್ಲ. ನಾವು ಬಾಲ್ಯದಿಂದಲೂ ಅವರನ್ನು ಅನುಸರಿಸಿದ್ದೇವೆ. ಅವರಿಂದ ಸ್ಫೂರ್ತಿ ಪಡೆದಿದ್ದೇವೆ. ಇಲ್ಲಿ ಅಶಿಸ್ತು ಎಲ್ಲಿದೆ?, ನಾವು ಇಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಕುಳಿತಿದ್ದೇವೆ'' ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತೆ ವಿನೇಶ್ ಫೋಗಟ್ ಕೂಡ ಪಿಟಿ ಉಷಾ ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ನಾವು ಸಂವಿಧಾನದ ಪ್ರಕಾರ ಜೀವಿಸುತ್ತಿದ್ದೇವೆ. ಸ್ವತಂತ್ರ ನಾಗರಿಕರು ನಾವು ಎಲ್ಲಿ ಬೇಕಾದರೂ ಹೋಗಬಹುದು. ನಾವು ಬೀದಿಗಳಲ್ಲಿ ಕುಳಿತಿದ್ದರೆ, ಐಒಎ ಅಥವಾ ಕ್ರೀಡಾ ಸಚಿವಾಲಯವಾಗಲಿ ಯಾರೂ ನಮ್ಮ ಮಾತು ಕೇಳುತ್ತಿಲ್ಲ. ಇದಕ್ಕೆ ಕಾರಣ ಏನಾದರೂ ಇರಬೇಕು. ಪಿಟಿ ಉಷಾ ಅವರ ಈ ಮಾತುಗಳು ಸಂವೇದನಾರಹಿತವಾಗಿದೆ. ನಾನು ಅವರಿಗೆ ಕರೆ ಮಾಡಿದ್ದರೂ, ಅವರು ನನ್ನ ಫೋನ್ ಸ್ವೀಕರಿಸಲಿಲ್ಲ'' ಎಂದು ಫೋಗಟ್ ಬೇಸರ ವ್ಯಕ್ತಪಡಿದ್ದಾರೆ.
ಒಲಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಮಾತನಾಡಿ, ''ಪಿಟಿ ಉಷಾ ಅವರು ಐಒಎ ಮುಖ್ಯಸ್ಥೆ ಮತ್ತು ಸ್ವತಃ ಮಹಿಳೆಯಾಗಿ ಇಂತಹ ಹೇಳಿಕೆ ನೀಡಿದ್ದು ಕೇಳಿ ನಿಮಗೆ ದುಃಖವಾಗುತ್ತದೆ. ಅಸೋಸಿಯೇಷನ್ಗೆ ಸಂಪರ್ಕಿಸಬೇಕೆಂದು ಅವರು ಹೇಳಿದ್ದಾರೆ. ಆದರೆ, ನಾವು ಮೂರು ತಿಂಗಳ ಹಿಂದೆಯೇ ಅಲ್ಲಿಗೆ ಹೋಗಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ'' ಎಂದು ದೂರಿದರು.
ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ ಬೆಂಬಲ: ಮತ್ತೊಂದೆಡೆ, ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಇತರ ಕ್ರೀಡಾಪಟುಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ಅಭಿನವ್ ಬಿಂದ್ರಾ ಮತ್ತು ನೀರಜ್ ಚೋಪ್ರಾ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. "ಕ್ರೀಡಾಪಟುಗಳಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ನಾವು ಪ್ರತಿದಿನ ಕಠಿಣ ಶ್ರಮ ಪಡುತ್ತೇವೆ. ಭಾರತೀಯ ಕುಸ್ತಿ ಫೆಡರೇಶನ್ನಲ್ಲಿ ಕಿರುಕುಳದ ಆರೋಪಗಳ ಬಗ್ಗೆ ನಮ್ಮ ಕ್ರೀಡಾಪಟುಗಳು ಬೀದಿಗಿಳಿದು ಪ್ರತಿಭಟಿಸುವ ಅಗತ್ಯ ಕಂಡು ಬಂದಿರುವುದು ಬಹಳ ಕಳವಳಕಾರಿಯಾಗಿದೆ" ಎಂದು ಬಿಂದ್ರಾ ಟ್ವೀಟ್ ಮಾಡಿದ್ದಾರೆ.
ಸುಪ್ರೀಂನಲ್ಲಿ ಅರ್ಜಿ ವಿಚಾರಣೆ: (ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಲೈಂಗಿಕ ಕಿರುಕುಳ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆಗಾಗಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಕಾಶಿ ಮಲಿಕ್ ನೇತೃತ್ವದ ಪ್ರತಿಭಟನಾ ನಿರತ ಕುಸ್ತಿಪಟುಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದಿನ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಕುಸ್ತಿಪಟುಗಳ ಆರೋಪಗಳು 'ಗಂಭೀರ' ಸ್ವರೂಪವಾಗಿ ಎಂದು ಹೇಳಿ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ದಯವಿಟ್ಟು ನಮ್ಮ 'ಮನ್ ಕಿ ಬಾತ್' ಕೇಳಿ: ಪ್ರಧಾನಿ ಮೋದಿಗೆ ಕುಸ್ತಿಪಟುಗಳ ಮನವಿ