ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಜಯ ಗಳಿಸಿವೆ. ದಿನದ ಎರಡನೇ ಪಂದ್ಯದಲ್ಲಿ ಜೈಪುರವು ತೆಲುಗು ಟೈಟಾನ್ಸ್ ವಿರುದ್ಧ 51-27 ಅಂತರದಲ್ಲಿ ಜಯ ಗಳಿಸಿದರೆ, ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ 42-38 ಅಂತರದ ಗೆಲುವು ಸಾಧಿಸಿದೆ.
ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿದ್ದ ಗುಜರಾತ್ ಜೈಂಟ್ಸ್ ದ್ವಿತಿಯಾರ್ಧದಲ್ಲಿ ತನ್ನ ತಪ್ಪು ಸರಿಪಡಿಸಿಕೊಂಡು ಉತ್ತಮ ಪೈಪೋಟಿ ನೀಡಿತು. ರಾಕೇಶ್ ರೈಡಿಂಗ್‌ನಲ್ಲಿ 18 ಅಂಕ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಹರಿಯಾಣ ಸ್ಟೀಲರ್ಸ್ ಪರ ಮೀತು ಶರ್ಮಾ 16 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಪ್ಯಾಂಥರ್ಸ್‌ಗೆ ಬೃಹತ್ ಅಂತರದ ಜಯ: ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 51-27 ಅಂತರದಲ್ಲಿ ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಕಬಡ್ಡಿ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಆರಂಭದಿಂದಲೂ ಪಂದ್ಯದದಲ್ಲಿ ಹಿಡಿತ ಸಾಧಿಸಿದ್ದ ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ 12 ಅಂಕಗಳನ್ನು ಗಳಿಸಿ ತಂಡದ ಭಾರಿ ಜಯಕ್ಕೆ ನೆರವಾದರು.
ರಾಹುಲ್ ಚೌಧರಿ ಕೂಡ 8 ಅಂಕ ಪಡೆದು ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಾಹುಲ್ ಹಾಗೂ ಅಂಕುಶ್ ಟ್ಯಾಕಲ್‌ನಲ್ಲಿ ಒಟ್ಟು 12 ಪಾಯಿಂಟ್ಸ್ ಗಳಿಸಿದ್ದು ತಂಡದ ಯಶಸ್ಸಿನ ಪ್ರಮುಖ ಹೈಲೈಟ್ಸ್ ಆಗಿತ್ತು. ಟೈಟಾನ್ಸ್ ಪರ ಆದರ್ಶ್ (9) ಹಾಗೂ ಮೊನು ಗೋಯತ್ (5) ರೈಡಿಂಗ್‌ನಲ್ಲಿ ಮಿಂಚಿದರೂ ಇತರ ಆಟಗಾರರ ಬೆಂಬಲ ಸಿಗಲಿಲ್ಲ.
ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್: ಯು ಮುಂಬಾಗೆ ಸೋಲುಣಿಸಿ 3ನೇ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್