ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 28ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 51-45ರ ಅಂತರದಲ್ಲಿ ಯುಪಿ ಯೋಧಾಸ್ ವಿರುದ್ಧ ಜಯ ಗಳಿಸಿತು.
ನಾಯಕ ಚಂದ್ರನ್ ರಂಜಿತ್ (20) ಹಾಗೂ ರಂಜಿತ್ (16) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗುಜರಾತ್ ಜೈಂಟ್ಸ್ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಗುಜರಾತ್ ಜೈಂಟ್ಸ್ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಯುಪಿ ಯೋಧಾಸ್ ಪರ ಪರ್ದೀಪ್ ನರ್ವಾಲ್ (17) ಹಾಗೂ ಸುರಿಂದರ್ ಗಿಲ್ (14) ಉತ್ತಮ ರೈಡಿಂಗ್ ತೋರಿದರೂ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ದ್ವಿತೀಯಾರ್ಧದ ಆರಂಭದಲ್ಲೇ ಗುಜರಾತ್ ಜೈಂಟ್ಸ್ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ 25-23 ಅಂಕಗಳಲ್ಲಿ ಮುನ್ನಡೆ ಕಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರದ ಐದು ನಿಮಿಷಗಳ ಅವಧಿಯಲ್ಲಿ ಯುಪಿ ಯೋಧಾಸ್ ಎರಡನೇ ಬಾರಿಗೆ ಆಲೌಟ್ ಆಗುವ ಮೂಲಕ ಗುಜರಾತ್ ಜೈಂಟ್ಸ್ 37-29 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.
![pro-kabaddi-league-gujarat-giants-won-against-up-yodhas](https://etvbharatimages.akamaized.net/etvbharat/prod-images/kn-bng-01-gujrath-giants-win-against-up-yoddhas-7210969_20102022075317_2010f_1666232597_555.jpg)
ಪಂದ್ಯ ಮುಗಿರಯಲು 4 ನಿಮಿಷ ಬಾಕಿ ಇರುವಾಗ ಯುಪಿ ಯೋಧಾಸ್ ಮತ್ತೊಮ್ಮೆ ಆಲೌಟ್ ಆಗುವ ಮೂಲಕ ಗುಜರಾತ್ ಜೈಂಟ್ಸ್ 49-38 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಜಯದತ್ತ ಮುನ್ನುಗ್ಗಿತು.
ಯುಪಿ ಯೋಧಾಸ್ಗೆ ಪ್ರಥಮಾರ್ಧದ ಮುನ್ನಡೆ: ಉತ್ತಮ ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 21-19 ಅಂತರದಲ್ಲಿ ಮುನ್ನಡೆಯಲ್ಲಿತ್ತು. ಪರ್ದೀಪ್ ನರ್ವಾಲ್ (8) ಹಾಗೂ ಸುರಿಂದರ್ ಗಿಲ್ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಪ್ರದೀಪ್ ನರ್ವಾಲ್ ಸೂಪರ್ ರೈಡ್ ಸಾಧನೆ ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು.
ಗುಜರಾತ್ ಜೈಂಟ್ಸ್ ಪರ ನಾಯಕ ಚಂದ್ರನ್ ರಂಜಿತ್ 13 ಅಂಕ ಗಳಿಸಿ ಪ್ರಥಮಾರ್ಧದಲ್ಲೇ ಸೂಪರ್ ಟೆನ್ ಸಾಧನೆ ಮಾಡಿದರು. ರಂಜಿತ್ ಒಟ್ಟು ಅಂಕದಲ್ಲಿ ಸೂಪರ್ ರೈಡ್ ಕೂಡ ಸೇರಿತ್ತು. ಸಮಬಲದ ಹೋರಾಟ ಕಂಡುಬಂದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಆಲೌಟ್ ಆಗಿದ್ದು ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು.
ಜೈಂಟ್ಸ್ ಪರ ರಾಕೇಶ್ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಗುಜರಾತ್ ಜೈಂಟ್ಸ್ ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಪ್ರಭುತ್ವ ಮೆರೆದಿತ್ತು. ಟ್ಯಾಕಲ್‌ನಲ್ಲಿ ಇತ್ತಂಡಗಳು ತಲಾ 2 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದವು.
ಇದನ್ನೂ ಓದಿ: ಸಾಧನೆಯ ಬೌಂಡರಿ..! ಕೊಹ್ಲಿ, ರೋಹಿತ್, ಬಾಬರ್ ಹಿಂದಿಕ್ಕಿದ ಐರ್ಲೆಂಡ್ ಆಟಗಾರ