ತಮಿಳುನಾಡಿನ ಜೂನಿಯರ್ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ್ ಅವರು ಚೆಸ್ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರಿಗೆ ಮತ್ತೊಮ್ಮೆ ಆಘಾತ ನೀಡಿದ್ದಾರೆ. ಈ ವರ್ಷದಲ್ಲಿ ಮೂರನೇ ಬಾರಿಗೆ ವಿಶ್ವ ನಂ.1 ಆಟಗಾರನಿಗೆ ಸೋಲುಣಿಸಿದ್ದಾರೆ.
ಸೋಮವಾರ ನಡೆದ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು 4- 2 ಗೇಮ್ ಅಂತರದಿಂದ ಸೋಲಿಸಿದರು. ಬ್ಲಿಟ್ಜ್ ಟೈ ಬ್ರೇಕ್ ಸೇರಿದಂತೆ ಮೂರು ನೇರ ಗೇಮ್‌ಗಳಲ್ಲಿ ಪ್ರಗ್ನಾನಂದ್, ಕಾರ್ಲ್‌ಸನ್ ವಿರುದ್ಧ ವಿಕ್ರಮ ಸಾಧಿಸಿದರು.
ಕಾರ್ಲ್‌ಸನ್ ವಿರುದ್ಧ ಗೆಲುವು ಸಾಧಿಸಿದಾಗ್ಯೂ ಟೂರ್ನಿಯಲ್ಲಿ ಪ್ರಗ್ನಾನಂದ್ ಅವರು 2ನೇ ಸ್ಥಾನ ಪಡೆದರು. ಅಂಕಗಳ ಆಧಾರದ ಮೇಲೆ ಮುಂದಿರುವ ಮ್ಯಾಗ್ನಸ್ 16 ಪಾಯಿಂಟ್ಗಳೊಂದಿಗೆ ಪ್ರಶಸ್ತಿ ಜಯಿಸಿದರು. ಪ್ರಗ್ನಾನಂದ್ 15 ಅಂಕ ಪಡೆದರು.
ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕಾರ್ಲ್‌ಸನ್, "ನಾನು ದಿನವಿಡೀ ಕೆಟ್ಟದಾಗಿ ಆಟವಾಡಿದೆ. ಸೋಲುವುದು ನಿಜಕ್ಕೂ ಒಳ್ಳೆಯದಲ್ಲ. ಕೊನೆಗೂ ಅರ್ಹವಾದ ಗೆಲುವು ಸಾಧಿಸಿದ್ದೇನೆ. ಕೆಲವೊಮ್ಮೆ ಈ ರೀತಿ ನಡೆಯುವುದು ಸಹಜ" ಎಂದು ಹೇಳಿದರು.
ಪ್ರಗ್ನಾನಂದ ಈ ವರ್ಷ ಅದ್ಭುತ ಲಯದಲ್ಲಿದ್ದಾರೆ. ಈ ಹಿಂದಿನ ಎರಡು ಆನ್‌ಲೈನ್ ಟೂರ್ನಿಗಳಲ್ಲಿ ವಿಶ್ವ ಚಾಂಪಿಯನ್ ಕಾರ್ಲ್ಸನ್ರಿಗೆ ಎರಡು ಬಾರಿ ಸೋಲುಣಿಸಿದ್ದರು. ಮಾಜಿ ವಿಶ್ವಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಬಳಿಕ ಕಾರ್ಲಸನ್ರಿಗೆ ಮಣ್ಣುಮುಕ್ಕಿಸಿದ ಎರಡನೇ ಮತ್ತು ಮೊದಲ ಅತಿ ಕಿರಿಯ ಆಟಗಾರ ಪ್ರಗ್ನಾನಂದ್ ಎಂಬ ಹೆಗ್ಗಳಿಕೆ ಇದೆ.
ಇತ್ತೀಚೆಗೆ ಚೆನ್ನೈನಲ್ಲಿ ಮುಕ್ತಾಯವಾದ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ 'ಬಿ' ತಂಡ ಕಂಚಿನ ಪದಕ ಪಡೆಯುವಲ್ಲಿ ಪ್ರಗ್ನಾನಂದ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕಳೆದ 8 ಏಷ್ಯಾಕಪ್ ಕ್ರಿಕೆಟ್ ಸಮರ ಹೇಗಿತ್ತು? ಈ ಸಲವೂ ಕಪ್ ನಮ್ದೇನಾ? ಕಂಪ್ಲೀಟ್ ಡೀಟೆಲ್ಸ್