ನವದೆಹಲಿ : ಪ್ರಧಾನಿ ಮೋದಿಯವರ ಉಡುಗೊರೆಗಳ ಹರಾಜು ಪ್ರಕ್ರಿಯೆ ನಿನ್ನೆಗೆ ಕೊನೆಗೊಂಡಿದೆ. ಈ ಹರಾಜಿನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವಲಿನ್ ಅತ್ಯಂತ ದುಬಾರಿ ಬೆಲೆಗೆ ಬಿಡ್ ಆಗಿದೆ.
ನೀರಜ್ ಅವರ ಜಾವಲಿನ್ಗೆ ಬರೋಬ್ಬರಿ 1.5 ಕೋಟಿ ರೂಪಾಯಿ ಬಿಡ್ ಮಾಡಲಾಗಿದೆ. ಭಾರತೀಯ ಅಥ್ಲೀಟ್ ಭವಾನಿ ದೇವಿ (1.25 ಕೋಟಿ ರೂ.), ಸುಮಿತ್ ಆಂಟಿಲ್ ಅವರ ಜಾವೆಲಿನ್ (1.002 ಕೋಟಿ ರೂ.) ಮತ್ತು ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಗ್ಲೌಸ್ (91 ಲಕ್ಷ ರೂ.) ರೂಪಾಯಿಗೆ ಬಿಡ್ ಆಗಿವೆ.
ಪ್ರಧಾನಿ ಮೋದಿಗೆ ನೀಡಲಾದ ಪ್ರತಿಷ್ಠಿತ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಮೂರನೇ ಸುತ್ತಿನ ಇ-ಹರಾಜು ಸೆ. 17ರಿಂದ ಅ.7, 2021ರವರೆಗೆ www.pmmementos.gov.in ಮೂಲಕ ನಡೆಸಲಾಯಿತು. ಇ-ಹರಾಜಿನ ಆದಾಯವು ನಮಾಮಿ ಗಂಗೆ ಮಿಷನ್ಗೆ ನೀಡಲು ಸರ್ಕಾರ ನಿರ್ಧರಿಸಿದೆ.
ಮೂರನೇ ಸುತ್ತಿನ ಇ-ಹರಾಜಿನಲ್ಲಿ 1,348 ವಸ್ತುಗಳನ್ನು ಇರಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಭಾರೀ ಆಸಕ್ತಿ ಹುಟ್ಟು ಹಾಕಿತು. ಈ ಸುತ್ತಿನ ಇ-ಹರಾಜಿನಲ್ಲಿ ಪ್ರಮುಖ ಅಂಶಗಳೆಂದರೆ ಪದಕ ವಿಜೇತ ಟೋಕಿಯೊ 2020 ಪ್ಯಾರಾಲಿಂಪಿಕ್ ಗೇಮ್ಸ್ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದ ಕ್ರೀಡಾ ಸ್ಮರಣಿಕೆಗಳು, ಅಯೋಧ್ಯೆ ರಾಮ ಮಂದಿರದ ಮಾದರಿಗಳು, ವಾರಣಾಸಿಯ ರುದ್ರಾಕ್ಷ ಸಭಾಂಗಣ ಮತ್ತು ಅನೇಕ ಇತರ ಅಮೂಲ್ಯ ಮತ್ತು ಆಸಕ್ತಿದಾಯಕ ಸಂಗ್ರಹಣೆಗಳಿದ್ದವು.
ಒಟ್ಟಾರೆ 8,600ಕ್ಕೂ ಹೆಚ್ಚು ಬಿಡ್‌ಗಳು ಈ ವಸ್ತುಗಳ ಮೇಲೆ ಕರೆಯಲಾಗಿದೆ. ಇದರಲ್ಲಿ ಸರ್ದಾರ್ ಪಟೇಲ್ ಅವರ ಮೂರ್ತಿಗೆ ಅತೀ ಹೆಚ್ಚು ಬಿಡ್ ಕರೆಯಲಾಗಿತ್ತು. ಒಟ್ಟು 140 ಬಿಡ್‌ಗಳು ಸರ್ದಾರ್ ಮೂರ್ತಿಗೆ ಕರೆಯಲಾಗಿತ್ತು.