ಪ್ಯಾರಿಸ್(ಫ್ರಾನ್ಸ್): ಇಲ್ಲಿ ನಡೆದ ಪ್ಯಾರಿಸ್ ಡೈಮಂಡ್ ಲೀಗ್ - 2023 ಅಥ್ಲೆಟಿಕ್ಸ್‌ನಲ್ಲಿ ಭಾರತದ ಲಾಂಗ್ಜಂಪರ್ ಮುರಳಿ ಶ್ರೀಶಂಕರ್ ಮೂರನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಶನಿವಾರ ನಡೆದ ಪುರುಷರ ಲಾಂಗ್ಜಂಪ್ನ ಅಂತಿಮ ಹಣಾಹಣಿಯಲ್ಲಿ ಶಂಕರ್ 8.09 ಮೀಟರ್ ಉದ್ದ ಜಿಗಿದರು. ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.
ಕಾಮನ್‌ವೆಲ್ತ್ ಗೇಮ್ಸ್ನ ಬೆಳ್ಳಿ ಪದಕ ವಿಜೇತ ಶ್ರೀಶಂಕರ್ 8.09 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಲ್ಲಿ ಡೈಮಂಡ್ ಲೀಗ್ ಕೂಟದಲ್ಲಿ ಅಗ್ರ ಮೂರನೇ ಸ್ಥಾನ ಗಳಿಸಿದ ಮೂರನೇ ಭಾರತೀಯ ಅಥ್ಲೀಟ್ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಡಿಸ್ಕಸ್ ಥ್ರೋವರ್ ವಿಕಾಸ್ ಗೌಡ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಇದ್ದಾರೆ.
ಶ್ರೀಶಂಕರ್ ತಮ್ಮ ಮೊದಲೆರಡು ಜಂಪ್ಗಳಲ್ಲಿ 8 ಮೀಟರ್ ದಾಟದೇ, 7.79ಮೀ ಮತ್ತು 7.94ಮೀಟರ್‌ವರೆಗೆ ಜಿಗಿದರು. ನಂತರದ ಮೂರನೇ ಪ್ರಯತ್ನದಲ್ಲಿ ಭಾರತೀಯ ಅಥ್ಲೀಟ್ 8.09 ಮೀ ಜಿಗಿದು ಪಾಯಿಂಟ್ ಹೆಚ್ಚಿಸಿಕೊಂಡರು. ಬಳಿಕ ತಮ್ಮ ನಾಲ್ಕನೇ ಮತ್ತು ಆರನೇ ಪ್ರಯತ್ನವನ್ನು ಫೌಲ್ ಮಾಡಿದರು. ಐದನೇ ಪ್ರಯತ್ನದಲ್ಲಿ 7.99 ಮೀ. ಉದ್ದ ಜಿಗಿದರು. ಸ್ವಿಟ್ಜರ್ಲೆಂಡ್‌ನ ಸೈಮನ್ ಎಹ್ಯಾಮರ್ ನಾಲ್ಕನೇ ಪ್ರಯತ್ನದಲ್ಲಿ 8.11 ಮೀ ಜಿಗಿದರೆ, ಹಾಲಿ ಒಲಿಂಪಿಕ್ ಚಾಂಪಿಯನ್ ಮಿಲ್ಟಿಯಾಡಿಸ್ ಟೆಂಟೊಗ್ಲೋ ಐದನೇ ಪ್ರಯತ್ನದಲ್ಲಿ 8.13 ಮೀ ಜಿಗಿದು ಪ್ರಶಸ್ತಿ ಪಡೆದುಕೊಂಡರು.
ಹಿನ್ನಡೆ ತಂದ ಫೌಲ್; ನಾಲ್ಕನೇ ಯತ್ನದಲ್ಲಿ ಮುರಳಿ ಮಾಡಿದ ಫೌಲ್ ಮತ್ತು ಸ್ವಿಟ್ಜರ್ಲೆಂಡ್‌ನ ಸೈಮನ್ ಎಹಮ್ಮರ್ ಅವರ 8.11 ಮೀ ಜಿಗಿತದಿಂದಾಗಿ ಮೂರನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿತು. ಈ ವೇಳೆ ಶ್ರೀಶಂಕರ್ ಐದನೇ ಪ್ರಯತ್ನದಲ್ಲಿ 7.99 ಮೀ ದಾಖಲಿಸಿದರು. ಬಳಿಕ ಆರನೇ ಪ್ರಯತ್ನವೂ ಫೌಲ್ ಮಾಡುವ ಮೂಲಕ ನಿರಾಸೆ ಅನುಭವಿಸಿದರು.
ಮುರಳಿ ಶ್ರೀಶಂಕರ್ ಡೈಮಂಡ್ ಲೀಗ್‌ನಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡರು. ಅವರು ಕಳೆದ ವರ್ಷ ಮೊನಾಕೊದಲ್ಲಿ 7.94 ಮೀ ಪ್ರಯತ್ನದಲ್ಲಿ ಆರನೇ ಸ್ಥಾನ ಪಡೆದಿದ್ದರು. ಕಳೆದ ವರ್ಷ 8.36 ಮೀಟರ್ ಉದ್ದ ಜಿಗಿಯುವ ಮೂಲಕ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದರು. ಭಾರತದವರೇ ಆದ ಜೆಸ್ವಿನ್ ಆಲ್ಡ್ರಿನ್ ಈ ವರ್ಷದ ಆರಂಭದಲ್ಲಿ 8.42 ಮೀ ಉದ್ದ ಹಾರುವ ಮೂಲಕ ಪುರುಷರ ಲಾಂಗ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
24 ವರ್ಷದ ಭಾರತೀಯ ಅಥ್ಲೀಟ್ ಶ್ರೀಶಂಕರ್, ಕಳೆದ ತಿಂಗಳು ಗ್ರೀಸ್‌ನ ಕಲ್ಲಿಥಿಯಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ನಲ್ಲಿ 8.18 ಮೀ ಕೂಟ ದಾಖಲೆಯೊಂದಿಗೆ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಚೀನಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದರು.
ಹಾಲಿ ಒಲಿಂಪಿಕ್ ಚಾಂಪಿಯನ್ ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು 8.13 ಮೀಟರ್‌ಗಳ ಅತ್ಯುತ್ತಮ ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದು ಪ್ರಶಸ್ತಿ ಜಯಿಸಿದರೆ, ಸ್ವಿಟ್ಜರ್ಲೆಂಡ್‌ನ ಸೈಮನ್ ಎಹ್ಯಾಮರ್ 8.11 ಮೀಟರ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು. ಟೋಕಿಯೊ ಒಲಿಂಪಿಕ್ನಲ್ಲಿ ಕಂಚು ಗೆದ್ದ ಕ್ಯೂಬಾದ ಮೇಕೆಲ್ ಮಾಸ್ಸೊ ನಿರಾಸೆ ಅನುಭವಿಸಿದರು. 7.83 ಮೀ ಜಿಗಿತದೊಂದಿಗೆ ಆರನೇ ಸ್ಥಾನ ಪಡೆದರು.
ಇದನ್ನೂ ಓದಿ: WTC Final: ರಹಾನೆ ಇನ್ನಿಂಗ್ಸ್ ಹೊಗಳಿದ ಆಸೀಸ್ ವೇಗಿ ಸ್ಟಾರ್ಕ್, ಸಂಕಷ್ಟದಲ್ಲಿ ಭಾರತ