ಭಾರತದ ಸ್ಟಾರ್ ಸ್ನೂಕರ್- ಬಿಲಿಯರ್ಡ್ಸ್ ಆಟಗಾರ, ಬೆಂಗಳೂರಿನ ಪಂಕಜ್ ಅಡ್ವಾಣಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಬಿಲಿಯರ್ಡ್ಸ್ 150 ಅಪ್ ಸ್ಪರ್ಧೆಯನ್ನು ಜಯಿಸಿ 25 ನೇ ಬಾರಿಗೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಫೈನಲ್‌ನಲ್ಲಿ ಭಾರತದವರೇ ಆದ ಸೌರಭ್ ಕೊಠಾರಿ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿದರು. ಪಂಕಜ್ 25ನೇ ವಿಶ್ವ ಪ್ರಶಸ್ತಿ ಗೆದ್ದಿದ್ದು, ಈ ಚಾಂಪಿಯನ್‌ಶಿಪ್‌ನಲ್ಲಿ ಸತತ ಐದನೇ ಪ್ರಶಸ್ತಿ ಇದಾಗಿದೆ.
ಏಳು ಸುತ್ತುಗಳಲ್ಲಿ ನಡೆದ ಫೈನಲ್‌ನಲ್ಲಿ ಪಂಕಜ್ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದರು. ಮೊದಲ ಸುತ್ತನ್ನು ಗೆದ್ದ ಬಳಿಕ ಪಂಕಜ್ ಚಾಂಪಿಯನ್ಶಿಪ್ ಗೆಲ್ಲುವ ಸುಳಿವು ನೀಡಿದರು ಬಳಿಕ ನಡೆದ ಮೂರೂ ಸುತ್ತುಗಳಲ್ಲಿ ಗೆದ್ದು 4-0 ಯಿಂದ ಪ್ರಶಸ್ತಿ ಎತ್ತಿ ಹಿಡಿದರು.
ಕೊರೊನಾದಿಂದಾಗಿ 3 ವರ್ಷಗಳ ನಂತರ ನಡೆದ ಟೂರ್ನಿಯಲ್ಲಿ ಪಂಕಜ್ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದರು. ಕ್ಯಾಲೆಂಡರ್ ವರ್ಷದಲ್ಲಿ ದಾಖಲೆಯ ಐದನೇ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಜಯಿಸಿದರು. ಇದಕ್ಕೂ ಮೊದಲು ರಾಷ್ಟ್ರೀಯ, ಏಷ್ಯನ್ ಬಳಿಕ ವಿಶ್ವ ಚಾಂಪಿಯನ್ ಗೆದ್ದು ಇತಿಹಾಸ ಸೃಷ್ಟಿಸಿದರು.
"ಸತತ ಐದು ವಿಶ್ವ ಪ್ರಶಸ್ತಿ ಗೆದ್ದಿರುವುದು ಕನಸಿನಂತಿದೆ. ಈ ವರ್ಷ ನನ್ನ ಪ್ರದರ್ಶನ ಮತ್ತು ನಾನು ಆಡಿದ ಪ್ರತಿ ಬಿಲಿಯರ್ಡ್ಸ್ ಪಂದ್ಯಾವಳಿಯನ್ನು ಗೆದ್ದಿರುವುದು ತುಂಬಾ ಖುಷಿ ತಂದಿದೆ. ದೇಶದ ಪರವಾಗಿ ಆಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಗೆಲುವು ಸಾಧಿಸಿರುವುದು ಗೌರವದ ವಿಚಾರ" ಎಂದು ಪಂಕಜ್ ಹೇಳಿದರು.
ಬಿಲಿಯರ್ಡ್ಸ್ನಲ್ಲಿ ಪಂಕಜ್ಗೆ ಇದು 16ನೇ ಪ್ರಶಸ್ತಿಯಾಗಿದೆ. ಉಳಿದ 9 ಪ್ರಶಸ್ತಿಗಳು ಸ್ನೂಕರ್ನಲ್ಲಿ ಬಂದಿವೆ. ಇನ್ನು, ಟೂರ್ನಿಯಲ್ಲಿ ಭಾರತದವರೇ ಆದ ಎಸ್.ಶ್ರೀಕೃಷ್ಣ ಕಂಚಿನ ಪದಕ ಜಯಿಸಿದರು. ಈ ಮೂಲಕ ಭಾರತ ಪದಕಗಳ ಕ್ಲೀನ್ಸ್ವೀಪ್ ಮಾಡಿದೆ.
ಓದಿ: ದ.ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್ ಪುತ್ರಿ ನಿಧನ: ಶೋಕದಲ್ಲಿಯೂ ಭಾರತ ವಿರುದ್ಧ ಇಂದು ಆಡುವ ಸಾಧ್ಯತೆ