ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಸಾಧನೆಯನ್ನು ಮೀರಿದ 24 ವರ್ಷದ "ಭರ್ಜಿ ದೊರೆ" ನೀರಜ್ ಚೋಪ್ರಾರನ್ನು ಅಂಜು ಬಾಬಿ ಜಾರ್ಜ್ ಮುಕ್ತ ಕಂಠದಿಂದ ಹೊಗಳಿದ್ದಾರೆ. ಅಲ್ಲದೇ, "ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು" ಎಂದು ಬಣ್ಣಿಸಿದ್ದಾರೆ. ಚಾಂಪಿಯನ್ಶಿಪ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 88.13 ಮೀಟರ್ ದೂರ ಭರ್ಜಿ ಎಸೆದು ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅಂಜು ಬಾಬಿ ಜಾರ್ಜ್, "ನೀರಜ್ ಚೋಪ್ರಾ ಅವರು ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಾಂಪಿಯನ್ ಆಗಿದ್ದರು. ಇದೀಗ 200 ದೇಶಗಳು ಸ್ಪರ್ಧಿಸುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಪಡೆದು ಎರಡು ಪ್ರಮುಖ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರೀಡಾಪಟು" ಎಂದು ಶ್ಲಾಘಿಸಿದರು.
"ಅತ್ಯಂತ ಕಠಿಣ ಕ್ರೀಡಾ ಕೂಟಗಳಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕೂಡ ಒಂದು. ಇಲ್ಲಿ 200 ಕ್ಕೂ ಅಧಿಕ ರಾಷ್ಟ್ರಗಳು ಭಾಗವಹಿಸುತ್ತವೆ. ಇದರಲ್ಲಿ ಪದಕ ಜಯಿಸುವುದು ನಿಜವಾಗಿಯೂ ಅದ್ಭುತ ಸಾಧನೆ. 2003ರ ಬಳಿಕ ಮತ್ತೆ ದೇಶಕ್ಕೆ ಪದಕ ಬಂದಿದೆ. ನೀರಜ್ ನಿಜವಾದ ಚಾಂಪಿಯನ್ ಎಂದು ಸಾಬೀತುಪಡಿಸಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಅಂಜು ಬಾಬಿ ಹೇಳಿದರು.
ನೀರಜ್ ಚೋಪ್ರಾ ಇಂದು ತನ್ನ ಮೊದಲ ಪ್ರಯತ್ನದಲ್ಲಿ 88.13 ಮೀ. ದೂರ ಭರ್ಜಿ ಎಸೆದರೆ, 2ನೇ ಪ್ರಯತ್ನದಲ್ಲಿ ವಿಫಲವಾದರು. ಬಳಿಕ 82.39, 86.37, 88.13 ಮೀಟರ್ ಎಸೆದು, ಕೊನೆಯ 2 ಪ್ರಯತ್ನಗಳನ್ನು ಫೌಲ್ ಮಾಡಿದರು.
ನೀರಜ್ ಈ ವರ್ಷಾರಂಭದಲ್ಲಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಂಡು 89.94 ಮೀಟರ್ ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಮುರಿದಿದ್ದರು. ಒಲಿಂಪಿಕ್ಸ್ ಚಾಂಪಿಯನ್, ಏಷ್ಯನ್ ಗೇಮ್ಸ್ ಚಾಂಪಿಯನ್, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಬಳಿಕ ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲೂ ಬೆಳ್ಳಿ ಸಾಧನೆ ಮಾಡಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ನೀರಜ್ ಚೋಪ್ರಾ