ನವದೆಹಲಿ : ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ತಮ್ಮ ಊರಾದ ಪಾಣಿಪತ್ನಲ್ಲಿ ಸ್ವಾಗತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಕಾರ್ಯಕ್ರಮದ ಮಧ್ಯದಲ್ಲೇ ಹೊರ ನಡೆದಿದ್ದಾರೆ. ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ.
ಆದರೆ, ಕೋವಿಡ್ ಟೆಸ್ಟ್ನಲ್ಲಿ ನೀರಜ್ ಚೋಪ್ರಾ ನೆಗೆಟಿವ್ ಪಡೆದಿದ್ದರು. ಚೇತರಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರಾದರೂ ಮಂಗಳವಾರ ಮತ್ತೆ ಜ್ವರ ಹೆಚ್ಚಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಧ್ಯಮಕ್ಕೆ ನೀರಜ್ ಸ್ನೇಹಿತರು ಮತ್ತು ಕುಟುಂಬದವರು ನೀಡಿದ ಮಾಹಿತಿಯ ಪ್ರಕಾರ, ಬಿಸಿಲಿನ ನಡುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ತುಂಬಾ ಬಳಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಹಾಗಾಗಿ, ಕಾರ್ಯಕ್ರಮವನ್ನು ಅರ್ಧದಲ್ಲಿ ಬಿಡಬೇಕಾಯಿತು. ಅವರು ದೆಹಲಿಯಿಂದ ಪಾಣಿಪತ್‌ಗೆ ಕಾರ್ ರ್ಯಾಲಿಯಲ್ಲಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಆದಾಗ್ಯೂ ಅವರ ಕುಟುಂಬಸ್ಥರು ತಮ್ಮ ಪುತ್ರನಿಗೆ ಅದ್ದೂರಿ ಸ್ವಾಗತ ಕೋರಲು ಎಲ್ಲಾ ರೀತಿಯ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ನೀರಜ್ ಚೋಪ್ರಾ ಭಾರತಕ್ಕೆ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಏಕೈಕ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಜಾವಲಿನ್ ಸ್ಪರ್ಧೆಯಲ್ಲಿ 87.58 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.
ಇದನ್ನು ಓದಿ : 'ಸುಂದರ್ ಭಾರತ್': ಜೆಎಸ್ಡಬ್ಲ್ಯೂ ಪೇಂಟ್ಸ್ನಿಂದ ಒಲಿಂಪಿಕ್ ಕ್ರೀಡಾಪಟುಗಳ ಮನೆಗಳಿಗೆ ಉಚಿತ ಪೇಂಟಿಂಗ್