ಅಕಾಪುಲ್ಕೊ(ಮೆಕ್ಸಿಕೊ): 21 ಗ್ರ್ಯಾಂಡ್ಸ್ಲಾಮ್ಗಳ ಒಡೆಯ ರಾಫೆಲ್ ನಡಾಲ್ ಶನಿವಾರ ರಾತ್ರಿ ನಡೆದ ಮೆಕ್ಸಿಕೋ ಓಪನ್ ಫೈನಲ್ ಪಂದ್ಯದಲ್ಲಿ ಬ್ರಿಟನ್ ಕ್ಯಾಮರೂನ್ ನಾರೀ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಆಗಿದ್ದಾರೆ.
ಕಳೆದ ತಿಂಗಳಷ್ಟೇ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಶ್ರೇಯಕ್ಕೆ ಪಾತ್ರರಾಗಿರುವ 35 ವರ್ಷದ ನಡಾಲ್ 6-4, -6-4ರ ಅಂತರದಲ್ಲಿ ಮೆಕ್ಸಿಕೊ ಓಪನ್ ತಮ್ಮದಾಗಿಸಿಕೊಂಡರು. ಈ ಮೂಲಕ ವೃತ್ತಿ ಜೀವನದ 91ನೇ ಎಟಿಪಿ ಟೈಟಲ್ ಗೆದ್ದರು. ಅಲ್ಲದೆ 2022ರಲ್ಲಿ ತಮ್ಮ ಅಜೇಯ ಓಟವನ್ನು 15-0ಗೆ ವಿಸ್ತರಿಸಿಕೊಂಡಿದ್ದಾರೆ.
ನಡಾಲ್ 2022ರಲ್ಲಿ ಮೆಲ್ಬೋರ್ನ್ ಎಟಿಪಿ, ಆಸ್ಟ್ರೇಲಿಯನ್ ಓಪನ್ ಮತ್ತು ಮೆಕ್ಸಿಕೊ ಓಪನ್ ಗೆದ್ದಿದ್ದಾರೆ. ಇನ್ನು ನಡಾಲ್ ಅತಿಹೆಚ್ಚು ಎಟಿಪಿ ಟೈಟಲ್ಸ್ ಗೆದ್ದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಜಿಮ್ಮಿ ಕಾನರ್ಸ್ 109 , ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ 103 ಮತ್ತು ಅಮೆರಿಕಾದ ಇವಾನ್ ಲೆಂಡ್ಲ್ 94 ಪ್ರಶಸ್ತಿ ಗೆದ್ದು ಮೊದಲ 3 ಸ್ಥಾನದಲ್ಲಿದ್ದಾರೆ. ನೊವಾಕ್ ಜೊಕೊವಿಕ್ 86 ಟೈಟಲ್ ಗೆದ್ದಿದ್ದಾರೆ.
ಸ್ಪೇನ್ನ ಸ್ಟಾರ್ 4ನೇ ಬಾರಿ ಅಕಾಪುಲ್ಕೋನಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಅವರು 2005, 2013 ಮತ್ತು 2020ರಲ್ಲಿ ಚಾಂಪಿಯನ್ ಆಗಿದ್ದರು.
ಪುರುಷರ ಡಬಲ್ಸ್ನಲ್ಲಿ ಸ್ಪೇನ್-ಗ್ರೀಕ್ ಜೋಡಿ ಫೆಲಿಸಿಯಾನೊ ಲೊಪೆಜ್ ಮತ್ತು ಸ್ಟೆಫನೊಸ್ ಸಿಟ್ಸಿಪಾಸ್ 7-5, 6-4ರಲ್ಲಿ ಮಾರ್ಸೆಲೊ ಅರೆವಾಲೊ ಮತ್ತು ಜೀನ್-ಜೂಲಿಯನ್ ರೋಜರ್ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್ಗಳ ಭರ್ಜರಿ ಗೆಲುವು