ನವದೆಹಲಿ: 6 ಬಾರಿಯ ವಿಶ್ವಚಾಂಪಿಯನ್ ಮೇರಿಕೋಮ್ ಹಾಗೂ ಮತ್ತಿಬ್ಬರು ಒಲಿಂಪಿಕ್ಸ್ ಬೌಂಡ್ ಬಾಕ್ಸರ್ಗಳು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ಟೋಕಿಯೋ ಒಲಿಂಪಿಕ್ಸ್ಗಾಗಿ ತರಬೇತಿ ಪಡೆಯಲಿದ್ದಾರೆ.
ದೆಹಲಿಯಲ್ಲಿ ಮಹಿಳಾ ಬಾಕ್ಸರ್ಗಳಿಗಾಗಿ ನಡೆಯಬೇಕಿದ್ದ ರಾಷ್ಟ್ರೀಯ ತರಬೇತಿ ಶಿಬಿರ, ಅಲ್ಲಿನ ಸಹಾಯಕ ಸಿಬ್ಬಂದಿ ಮತ್ತು ಬಾಕ್ಸರ್ಗಳಿಗೆ ಕೋವಿಡ್ 19 ತಗುಲಿದ್ದರಿಂದ ರದ್ದಾಗಿತ್ತು.
ಈಗಾಗಲೇ ಲೌವ್ಲಿನಾ ಬೊರ್ಗೊಹೈನ್(68ಕೆಜಿ) ಮತ್ತಯ ಸಿಮ್ರಾನ್ಜಿತ್ ಕೌರ್(60ಕೆಜಿ) ಪುಣೆಯಲ್ಲಿ ತರಬೇತಿ ನಡೆಸುತ್ತಿದ್ದು, ಮೇರಿಕೋಮ್(51 ಕೆಜಿ) ಕೋವಿಡ್ 19 ಟೆಸ್ಟ್ ಪೂರ್ಣಗೊಳಿಸಿದ ನಂತರ ಅವರಿಬ್ಬರ ಜೊತೆ ಸೇರಿಕೊಳ್ಳಲಿದ್ದಾರೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಬಾಕ್ಸರ್ಗಳನ್ನು ಇಬ್ಬರು ಪಾರ್ಟ್ನರ್ಗಳ ಜೊತೆಗೆ 3 ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗಿದೆ.
75 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವ ಪೂಜಾರಾಣಿ ಕರ್ನಾಟಕದ ಬಳ್ಳಾರಿಯ ಸ್ಫೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿಯನ್ನು ಮುಂದುವರಿಸಲಿದ್ದಾರೆ.
ಮೇರಿ ಕೋಮ್ ತನ್ನ ತರಬೇತುದಾರ ಮತ್ತು ಮಾಜಿ ಬಾಕ್ಸರ್ ಚೋಟೆ ಲಾಲ್ ಯಾದವ್ ಅವರ ಉಪಸ್ಥಿತಿಯನ್ನು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ಯಾದವ್ ಕಳೆದ ತಿಂಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹಾಗಾಗಿ ಪ್ರಸ್ತುತ ಕ್ವಾರಂಟೈನ್ನಲ್ಲಿ ಮುಂದುವರೆದಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ನೆಗೆಟಿವ್ ಪಡೆದ ನಂತರ ಯಾದವ್ ಶಿಬಿರಕ್ಕೆ ಸೇರುವ ನಿರೀಕ್ಷೆಯಿದೆ.