ಬೆಂಗಳೂರು: ಮಾರಕ ಕೊರೊನಾ ವೈರಸ್ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಪ್ರತಿಯೊಂದು ಕ್ಷೇತ್ರವೂ ನಷ್ಟ ಅನುಭವಿಸುತ್ತಿದೆ. ಅದೇ ರೀತಿ ಈ ಹೆಮ್ಮಾರಿ, ಕ್ರೀಡಾಪಟುಗಳ ಕನಸನ್ನೇ ಕಿತ್ತು ತಿಂದಿದೆ. ಕಳೆದ ಎರಡು ತಿಂಗಳಿಂದ ಲಾಕ್ಡೌನ್ ಇರುವ ಕಾರಣ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳು ಬಂದ್ ಆಗಿವೆ.
ಕೊರೊನಾ ವೈರಸ್ ದೇಶದ ಅಥ್ಲೆಟಿಕ್ಸ್ಗಳ ಕನಸನ್ನು ಛಿದ್ರ ಮಾಡಿದೆ. ಅದೇ ರೀತಿ ಕಿಕ್ ಬಾಕ್ಸಿಂಗ್ನಲ್ಲಿ ಮಿಂಚಬೇಕು ಎಂದು ಕನಸು ಕಟ್ಟಿಕೊಂಡು 5-6 ವರ್ಷಗಳಿಂದ ನಿರಂತರವಾಗಿ ಕಿಕ್ ಬಾಕ್ಸಿಂಗ್ ಅಭ್ಯಾಸ ಮಾಡುತ್ತಾ ಕೆಲವೇ ದಿನಗಳಲ್ಲಿ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಕೊರೊನಾ ವೈರಸ್ ಕಿಕ್ ಬಾಕ್ಸರ್ಗಳಿಗೆ ಕಿಕ್ ನೀಡಿ ಕನಸಿಗೆ ತಣ್ಣೀರೆರಚಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಹಾಗೂ ಕೋಚ್ ಶರಣ್ ತಮ್ಮ ನೋವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ಪರಿಣಾಮ ನಾನು 2 ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಮಿಸ್ ಮಾಡಿಕೊಂಡಿದ್ದೇನೆ. ನನ್ನ ಗರಡಿಯಲ್ಲಿ ಪಳಗಿರುವ ನಾಲ್ಕು ಹುಡುಗರು ಕೂಡಾ ವರ್ಲ್ಡ್ ಮೋತ ಬಾಕ್ಸಿಂಗ್ ಚಾಂಪಿಯನ್ಶಿಪ್ ಹಾಗೂ ವಾಕ್ ಓವರ್ ಇಂಡಿಯಾ ಚಾಂಪಿಯನ್ಶಿಪ್ಗೆ ಸೆಲೆಕ್ಟ್ ಆಗಿದ್ದರು. ಆದರೆ ಈಗ ಕೊರೊನಾದಿಂದ ಡ್ರಾಪ್ ಔಟ್ ಆಗಿದೆ. ಅವರು ಈ ಹಂತಕ್ಕೆ ಬರಲು ವರ್ಷಾನುಗಟ್ಟಲೆ ಶ್ರಮ ಹಾಕಿದ್ರು. ಆದರೆ ಕೊರೊನಾ ಅವರ ಶ್ರಮವನ್ನು ನೀರಿನಲ್ಲಿ ಹೋಮ ಮಾಡಿದೆ. ಒಟ್ಟಾರೆ ಕಿಕ್ ಬಾಕ್ಸರ್ಗಳು 5-6 ವರ್ಷಗಳಿಂದ ಮಾಡಿದ್ದ ಅಭ್ಯಾಸ ವ್ಯರ್ಥವಾಗಿದೆ. ಇದರ ಜೊತೆಗೆ ಲಾಕ್ಡೌನ್ ಇರುವ ಕಾರಣ ಜಿಮ್ ಕೂಡಾ ಓಪನ್ ಆಗಿಲ್ಲ, ಇದರಿಂದ ನಮಗೆ ಫಿಟ್ನೆಸ್ ಕಾಯ್ದುಕೊಳ್ಳಲು ಆಗುತ್ತಿಲ್ಲ.
ನಾನು ಕಿಕ್ ಬಾಕ್ಸಿಂಗ್ ತರಬೇತಿ ನೀಡಿ ಜೀವನ ನಡೆಸುತ್ತಿದ್ದೆ ,ಈಗ ನನಗೆ ಆರ್ಥಿಕ ಹೊರೆಯಾಗಿದೆ. ಪ್ರತಿ ತಿಂಗಳು ಜಿಮ್ಗೆ ಎಲ್ಲಾ ಖರ್ಚು ಸೇರಿ 2 ಲಕ್ಷ ರೂಪಾಯಿ ಬಾಡಿಗೆ ಕಟ್ಟಬೇಕು. ಆದರೆ ಈ ಲಾಕ್ಡೌನ್ ಆರಂಭವಾದಾಗಿನಿಂದ ಯಾರೂ ಜಿಮ್ ಕಡೆ ಬರುತ್ತಿಲ್ಲ. ಇದರಿಂದ ಕೈಯ್ಯಲ್ಲಿ ಹಣವಿಲ್ಲ. ಕೊರೊನಾದಿಂದ ನಮ್ಮನ್ನು ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಅಗತ್ಯ. ಆದರೆ ಈ ಕಿಕ್ ಬಾಕ್ಸಿಂಗ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ ಎಂದು ಶರಣ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾವು ಸರ್ಕಾರದಿಂದ ಪರಿಹಾರ ಬಯಸುವುದಿಲ್ಲ. ಅದರ ಬದಲಾಗಿ ನಮಗೆ ಜಿಮ್ ತೆರೆಯಲು ಅನುಮತಿ ನೀಡಿದರೆ ಸಾಕು ಎಂದು ಶರಣ್ ಮನವಿ ಮಾಡಿಕೊಂಡಿದ್ದಾರೆ.