ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಾಮ ನಿರ್ದೇಶನ ಮಾಡಿದೆ. 2024ರ ಜನವರಿ 9ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಆಟಗಾರರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. ನಮಗೆ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ದೊಡ್ಡ ಗೌರವ ಎಂದು ಚಿರಾಗ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. "ಒಬ್ಬ ಕ್ರೀಡಾಪಟುವಾಗಿ ಈ ಪ್ರಶಸ್ತಿ ಸ್ವೀಕರಿಸುವುದು ನಿಜವಾಗಿಯೂ ದೊಡ್ಡ ಗೌರವ. ನಾವೆಲ್ಲರೂ ಪದಕಗಳನ್ನು ಗೆಲ್ಲಲು ಮತ್ತು ಅತ್ಯುತ್ತಮ ಗೌರವಗಳನ್ನು ಗಳಿಸಲು ಸಾಕಷ್ಟು ಶ್ರಮಿಸುತ್ತೇವೆ. ಪ್ರಶಸ್ತಿಯು ನಮ್ಮನ್ನು ಇನ್ನಷ್ಟು ಶ್ರಮಿಸುವಂತೆ ಉತ್ತೇಜಿಸುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದರು.
'ಸಾತ್-ಚಿ' ಪಯಣ: 'ಸಾತ್-ಚಿ' ಎಂದು ಜನಪ್ರಿಯವಾಗಿರುವ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಈ ವರ್ಷ ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಮೊಟ್ಟಮೊದಲ ಬ್ಯಾಡ್ಮಿಂಟನ್ ಚಿನ್ನ ಗೆದ್ದರು. ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಜಯಿಸಿದ್ದರು.
ಅಕ್ಟೋಬರ್‌ನಲ್ಲಿ ಈ ಜೋಡಿ ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಸ್ಥಾನ ಪಡೆದರು. ದೇಶದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ನಂ.1 ಪಟ್ಟಕ್ಕೇರಿದ ಮೊದಲ ಡಬಲ್ಸ್ ಜೋಡಿ ಎಂಬ ದಾಖಲೆ ಮಾಡಿದರು. ಈ ಷಟ್ಲರ್‌ಗಳು ದೇಶಕ್ಕೆ ಐತಿಹಾಸಿಕ ಥಾಮಸ್ ಕಪ್ ಗೆದ್ದು ಕೊಟ್ಟ ತಂಡದ ಭಾಗವಾಗಿದ್ದರು. ಅಲ್ಲದೇ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
"ಇದು ಭಾರತೀಯ ಬ್ಯಾಡ್ಮಿಂಟನ್ ಜೋಡಿ ಗೆದ್ದ ಮೊದಲ ಪ್ರಶಸ್ತಿ. ಇತರರಿಗೆ ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಳ್ಳಲು ಇದು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಈ ಸಾಧನೆಯು ಇತರ ಆಟಗಾರರಿಗೆ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಛಾಪು ಮೂಡಿಸಲು ಉತ್ಸಾಹ ನೀಡುತ್ತದೆ’’ ಎಂದಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಖೇಲ್ ರತ್ನ ಪ್ರಶಸ್ತಿಯನ್ನು ಈ ಮೊದಲು ಸ್ಟಾರ್ ಪ್ಯಾಡ್ಲರ್ ಅಚಂತ ಶರತ್ ಕಮಲ್, ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ಜಿ.ಎಂ.ವಿಶ್ವನಾಥನ್ ಆನಂದ್, ಸ್ಟಾರ್ ಜಾವೆಲಿನ್ ಅಥ್ಲೀಟ್ ನೀರಜ್ ಚೋಪ್ರಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುನಿಲ್ ಛೆಟ್ರಿ, ಬಾಕ್ಸರ್ ಮೇರಿ ಕೋಮ್, ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಹರಾಜಿನಲ್ಲಿ ಆರ್‌ಸಿಬಿಗೆ ಲಾಭವಾಗಿದ್ದೇನು?: ನಾಯಕ ಡು ಪ್ಲೆಸಿಸ್ ಹೇಳಿದ್ದಿಷ್ಟು