ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಬುಧವಾರ ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಕಾರ್ಯಾಚರಣೆಗಳನ್ನು ನಡೆಸಲು ಮೂವರು ಸದಸ್ಯರ ತಾತ್ಕಾಲಿಕ ಸಮಿತಿ ರಚಿಸಿದೆ. ಕ್ರೀಡಾ ಸಚಿವಾಲಯವು ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನೂತನವಾಗಿ ಆಯ್ಕೆಯಾಗಿದ್ದ ರಾಷ್ಟ್ರೀಯ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದೆ.
ವುಶು ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಸಮಿತಿಯ ಅಧ್ಯಕ್ಷರಾಗಿದ್ದರೆ, ಹಾಕಿ ಒಲಿಂಪಿಯನ್ ಎಂಎಂ ಸೋಮಯ ಮತ್ತು ಮಾಜಿ ಅಂತರರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಸಮಿತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿದ ನಂತರ ಕ್ರೀಡಾ ಸಚಿವಾಲಯವು ಮುಂದಿನ 48 ಗಂಟೆಗಳೊಳಗೆ ಹೊಸ ಸಮಿತಿ ರಚಿಸುವಂತೆ ಐಒಎಗೆ ತಿಳಿಸಿತ್ತು.
"ಹೊಸದಾಗಿ ಚುನಾಯಿತರಾದ ಡಬ್ಲ್ಯುಎಫ್‌ಐ ಅಧ್ಯಕ್ಷರು ಮತ್ತು ಅಧಿಕಾರಿಗಳು ತಾವು ಅನುಸರಿಸಬೇಕಾದ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವ ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಉತ್ತಮ ಆಡಳಿತದ ತತ್ವಗಳಿಗೆ ಅಡ್ಡಿಪಡಿಸಿದ್ದಾರೆ" ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ರಕಟಣೆಯಲ್ಲಿ ದೂರಿದ್ದಾರೆ.
ಡಬ್ಲ್ಯುಎಫ್‌ಐನ ಕಾರ್ಯಾಚರಣೆಗಳನ್ನು ನಿರ್ವಹಿಸುವ ಹೊಣೆಯನ್ನು ತಾತ್ಕಾಲಿಕ ಸಮಿತಿಗೆ ವಹಿಸಲಾಗಿದೆ. ಅವರು ಕ್ರೀಡಾಪಟುಗಳ ಆಯ್ಕೆ, ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಮೂದುಗಳನ್ನು ಸಲ್ಲಿಸುವುದು, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು, ವೆಬ್‌ಸೈಟ್ ನಿರ್ವಹಣೆ ಮತ್ತು ಇತರ ಸಂಬಂಧಿತ ಜವಾಬ್ದಾರಿಗಳನ್ನು ಒಳಗೊಂಡಿರುತ್ತಾರೆ.
ಈ ಹಿಂದೆ, ಡಬ್ಲ್ಯುಎಫ್‌ಐ ನಿರ್ವಹಿಸಲು ಮತ್ತು ಅದರ ಚುನಾವಣೆಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಐಒಎ ಏಪ್ರಿಲ್‌ನಲ್ಲಿ ರಚಿಸಿದ್ದ ತಾತ್ಕಾಲಿಕ ಸಮಿತಿಯ ಸದಸ್ಯರಲ್ಲಿ ಬಜ್ವಾ ಕೂಡ ಒಬ್ಬರಾಗಿದ್ದರು. ನ್ಯಾಯಾಲಯದ ಪ್ರಕರಣಗಳಿಂದಾಗಿ ಪದೇ ಪದೇ ವಿಳಂಬವಾದ ನಂತರ, ಡಿಸೆಂಬರ್ 21ರಂದು ಅಂತಿಮವಾಗಿ ಚುನಾವಣೆಗಳು ನಡೆದವು ಮತ್ತು ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ವಿಜಯಶಾಲಿಯಾಗಿದ್ದರು.
ಗುರುವಾರ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಗಂಟೆಗಳ ನಂತರ, ಯುಪಿಯ ಗೊಂಡಾದಲ್ಲಿ ಡಿಸೆಂಬರ್ 28 ರಿಂದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲಾಗುವುದು ಎಂದು ಸಂಜಯ್ ಘೋಷಿಸಿದ್ದರು. ರಾಷ್ಟ್ರೀಯ ಚಾಂಪಿಯನ್‌ಶಿಪ್ ಸ್ಪರ್ಧೆಯನ್ನು ಘೋಷಿಸುವಾಗ ಸೂಕ್ತವಾದ ಕಾರ್ಯವಿಧಾನವನ್ನು ಅನುಸರಿಸದೇ ತರಾತುರಿಯಲ್ಲಿ ಘೋಷಣೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸರ್ಕಾರವು ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿತ್ತು.
ಸಂಜಯ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗುತ್ತಿದ್ದಂತೆ ಕುಸ್ತಿಪಟು ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದರೆ, ಟೋಕಿಯೊ ಗೇಮ್ಸ್ ಕಂಚಿನ ವಿಜೇತ ಬಜರಂಗ್ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಮಂಗಳವಾರ ವಿನಿಶಾ ಫೋಗಟ್ ಕೂಡಾ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಮರಳಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್