ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್‌ನ ಕಲೆಕ್ಟರ್ಸ್ ಸ್ಪೋರ್ಟ್ಸ್ ಗ್ರೌಂಡ್‌ನ ರಿಂಗ್‌ನಲ್ಲಿ ಪುರುಷರಷ್ಟೇ ಏಕೆ ಬಾಕ್ಸಿಂಗ್ ಮಾಡುತ್ತಿದ್ದಾರೆ ಎಂದು ಬಾಲಕಿಯೊಬ್ಬಳು ತಂದೆಯನ್ನು ಕೇಳುತ್ತಾಳೆ. ಕ್ರೀಡೆಗೆ ಕಠಿಣ ಪರಿಶ್ರಮ ಮತ್ತು ಶಕ್ತಿಯ ಅಗತ್ಯವಿದೆ. ಹಾಗಾಗಿ ಗಂಡಸರೇ ಹೆಚ್ಚಿರುತ್ತಾರೆ ಎಂದು ತಂದೆ ವಿವರಿಸಿದರು. ಹುಡುಗಿಯರು ಬಾಕ್ಸಿಂಗ್ ಕಲಿಯಲು ಸಾಧ್ಯವಿಲ್ಲವೇ ಎಂದಾಗ.., ಮಗಳೇ, ಸಮಾಜದಲ್ಲಿ ಮಹಿಳೆ ಪುರುಷರ ಅಧೀನಳು. ಹಾಗಾಗಿ ಈ ಕ್ರೀಡೆಯಲ್ಲಿ ಅದು ಸಾಧ್ಯವಾಗಲಿಕ್ಕಿಲ್ಲ ಎಂದು ತಂದೆ ಹೇಳುತ್ತಾರೆ. ಇಲ್ಲಿಂದಲೇ ನೋಡಿ ಶುರುವಾಗಿದ್ದು ಸವಾಲಿನ ಜರೀನ್ ಪರ್ವ.
ತಂದೆಯ ಈ ಮಾತನ್ನು ಸುಳ್ಳು ಮಾಡಬೇಕೆಂದು ಬಾಕ್ಸಿಂಗ್ ಅಖಾಡಕ್ಕೆ ಇಳಿದು, ಇದೀಗ ಇಸ್ತಾಂಬುಲ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಗೆದ್ದು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿ, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ ತೆಲಂಗಾಣದ ನಿಖತ್ ಜರೀನ್. ನಿಖತ್ ಜರೀನ್ ತಾವು ಬಾಕ್ಸರ್ ಆಗಲು ಏನೆಲ್ಲಾ ಕಷ್ಟಪಟ್ಟರು. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಬಾಕ್ಸರ್ ಆಗಿ ಬೆಳೆದ ಬಗೆಯನ್ನು ಅವರ ತಂದೆ ಮೊಹಮ್ಮದ್ ಜಮೀಲ್ ಅಹ್ಮದ್ 'ಈಟಿವಿ ಭಾರತ' ನಡೆಸಿದ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.
ನಿಖತ್‌ಗೆ ಬಾಕ್ಸಿಂಗ್‌ನಲ್ಲಿ ಆಸಕ್ತಿ ಇದೆ ಎಂದು ನಿಮಗೆ ಯಾವಾಗ ಗೊತ್ತಾಯಿತು? ಬೇಸಿಗೆ ರಜೆಯಲ್ಲಿ ಆಕೆಯನ್ನು ನಾನು ಕಲೆಕ್ಟರ್ ಕ್ರೀಡಾ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಅವಳು ಇತರೆ ಹುಡುಗಿಯರ ಜೊತೆ ಸಮಯವನ್ನು ಕಳೆಯುತ್ತಿದ್ದಳು. ಆರಂಭದಲ್ಲಿ ಅಥ್ಲೆಟಿಕ್ಸ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದಳು. 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಭಾಗವಹಿಸಿದಳು. 4- 5 ತಿಂಗಳು ಬಳಿಕ ಮೈದಾನದಲ್ಲಿದ್ದ ಬಾಕ್ಸರ್‌ಗಳನ್ನು ಕಂಡು ಆಕೆ ಹುಡುಗಿಯರೇಕೆ ಬಾಕ್ಸಿಂಗ್ ಕಲಿಯಬಾರದು ಎಂದು ಕೇಳಿದಳು. ಅಂದಿನಿಂದಳೇ ನೋಡಿ ನಿಖತ್ ಬಾಕ್ಸಿಂಗ್ ಗೀಳು ಅಂಟಿಸಿಕೊಂಡಳು.
ಹೆಣ್ಣು ಮಕ್ಕಳನ್ನು ಕ್ರೀಡೆಗೆ ಸೇರಿಸುವುದು ಕಷ್ಟಕರ. ಅದನ್ನು ನೀವು ಹೇಗೆ ನಿಭಾಯಿಸಿದಿರಿ? ನಾನೇ ಒಬ್ಬ ಕ್ರೀಡಾಪಟು. ಅವಳು ಬಾಕ್ಸಿಂಗ್‌ನಲ್ಲಿ ಆಸಕ್ತಿ ಹೊಂದಿದ್ದಾಳೆಂದು ನನಗೆ ಅರ್ಥವಾದಾಗ, ನಾನು ಅವಳನ್ನು ಅಲ್ಲಿಗೆ ಕರೆದೊಯ್ದು ತರಬೇತಿಯನ್ನು ಪ್ರಾರಂಭಿಸಿದೆ. ಅವಳು ಚೆನ್ನಾಗಿ ಆಡಲು ಪ್ರಾರಂಭಿಸಿದಳು. ಜನರು ಅವಳನ್ನು ನೋಡಿ ಬಾಕ್ಸಿಂಗ್ ಆಡಲು ಏಕೆ ಬಿಡುತ್ತೀರಿ?. ಬೇರೆ ಕ್ರೀಡೆ ಕಲಿಸಿ ಎಂದು ಹೇಳುತ್ತಿದ್ದರು. ಅಲ್ಲದೇ, ಅವರು ಬೆನ್ನ ಹಿಂದೆಯೂ ಟೀಕಿಸಿದ್ದುಂಟು. ಇದು ಅವಳ ಆಯ್ಕೆ ಮತ್ತು ಉಳಿದದ್ದನ್ನು ನಾವು ದೇವರಿಗೆ ಬಿಟ್ಟಿದ್ದೇವೆ ಎಂದು ಉತ್ತರಿಸುತ್ತಿದ್ದೆ. ಬಳಿಕ ಆಕೆ ವಿಶಾಖಪಟ್ಟಣಂನಲ್ಲಿ ನಡೆದ ಭಾರತೀಯ ಶಿಬಿರಕ್ಕೆ ಆಯ್ಕೆಯಾದಳು. ಅಲ್ಲಿ ಅವಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಳು.
ರಾಷ್ಟ್ರಮಟ್ಟದವರೆಗೆ ಸ್ಪರ್ಧಿಸಿದಾಗ ಶಾರ್ಟ್ಸ್ ಮತ್ತು ಹಾಫ್ ಟೀ-ಶರ್ಟ್‌ಗಳನ್ನು ಧರಿಸಿದ್ದಕ್ಕಾಗಿ ಅವಳನ್ನು ಟೀಕಿಸಿದ್ದಾರೆ. ಧರಿಸುವ ಬಟ್ಟೆಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾವು ಇದನ್ನು ನಿರ್ಲಕ್ಷಿಸಿದೆವು. ಆಕೆ ಈಗ ಚಿನ್ನದ ಪದಕ ವಿಜೇತೆ. ಅದೇ ಜನ ಈಗ ನನ್ನನ್ನು ಅಭಿನಂದಿಸುತ್ತಿದ್ದಾರೆ. ಆಕೆಯನ್ನು ಭೇಟಿಯಾಗಲು ಜನರೇ ಬರುತ್ತಿದ್ದಾರೆ. ಈಗ ಎಲ್ಲವೂ ಬದಲಾಗಿದೆ.
ಮಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ತಂದೆಯ ಪಾತ್ರ ದೊಡ್ಡದಿದೆ. ನಮ್ಮ ದೇಶದ ತಂದೆಯರು ಮತ್ತು ಹೆಣ್ಣು ಮಕ್ಕಳಿಗೆ ನಿಮ್ಮ ಸಂದೇಶವೇನು?
ಯಾರ ಮಾತಿಗೂ ಕಿವಿಗೊಡಬೇಡಿ ಮತ್ತು ನಿಮ್ಮ ಮಗಳು ಬೇಕಾದುದನ್ನು ಮಾಡಲು ಅವಕಾಶ ಮಾಡಿಕೊಡಿ. ಕ್ರೀಡೆ ಅವರನ್ನು ಸಶಕ್ತಗೊಳಿಸುತ್ತದೆ. ಜೀವನದಲ್ಲಿ ಅವರನ್ನು ಮುಂದೆ ಕೊಂಡೊಯ್ಯುತ್ತದೆ. ಅವರನ್ನು ಬೆಂಬಲಿಸಿ ಸಾಕು ಎಂದು ಹೇಳಿದ್ದಾರೆ.
ಚಿನ್ನದ ಸಾಧನೆಯ ಬಗ್ಗೆ ನಿಖತ್ ಜರೀನ್ರ ಮಾತುಗಳು..
ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಐದನೇ ಭಾರತೀಯರು ನೀವು? ಇದು ನಿಮಗೆ ಎಷ್ಟು ಮಹತ್ವವಾಗಿದೆ?.. ಬಹಳ ಸಮಯದ ನಂತರ ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದೇನೆ. ಈ ಗೆಲುವು ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಂತಹ ಮುಂಬರುವ ಸ್ಪರ್ಧೆಗಳಿಗೆ ಖಂಡಿತವಾಗಿಯೂ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ನೀವು ಕಠಿಣ ಸಮಯವನ್ನು ಎದುರಿಸಿದ್ದೀರಿ. ಗಾಯಗಳಾಗಿವೆ. ಕೋವಿಡ್ ಸಮಸ್ಯೆ ಇವೆಲ್ಲಾ ನಿಮಗೆ ಎಷ್ಟು ಕಷ್ಟಕರವಾಗಿತ್ತು. ನಿಮ್ಮನ್ನು ಪ್ರೇರೇಪಿಸಿದ ಶಕ್ತಿ ಯಾವುದು?.. ನನ್ನ ಪ್ರಯಾಣ ರೋಲರ್-ಕೋಸ್ಟರ್ ಇದ್ದಂತೆ. ಬಹಳಷ್ಟು ಏರಿಳಿತಗಳಿವೆ. ಆದರೆ ನಾನು ಯಾವಾಗಲೂ ನನ್ನಲ್ಲಿ ನಂಬಿಕೆ ಇಟ್ಟಿಕೊಂಡಿದ್ದೇನೆ. ಮುಂದೊಂದು ದಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಕನಸನ್ನು ನನಸಾಗಿಸಿಕೊಳ್ಳುತ್ತೇನೆ ಎಂಬ ನಂಬಿಕೆ ನನ್ನಲ್ಲಿ ಸದಾ ಇತ್ತು. ಗಾಯಗಳು ನನ್ನನ್ನು ಬಾಧಿಸಿದರೂ. ಧೃತಿಗೆಡಲಿಲ್ಲ. ಬದಲಾಗಿ ನನ್ನನ್ನು ಹೋರಾಡಲು ಬಲಗೊಳಿಸಿದವು. ಹೀಗಾಗಿ ನಾನು ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಾಯಿತು.
ವಿಶ್ವ ಚಾಂಪಿಯನ್‌ಶಿಪ್‌ಗಾಗಿ ನೀವು ಹೇಗೆ ತಯಾರಿ ಮಾಡಿಕೊಂಡಿರಿ? ಈ ಸ್ಪರ್ಧೆಗಾಗಿ ನಾನು ತುಂಬಾ ಶ್ರಮಿಸಿದ್ದೇನೆ. ಯಾವುದೇ ಬೆಲೆ ತೆತ್ತಾದರೂ ನಾನು ಈ ಪದಕ ಗೆಲ್ಲಲೇಬೇಕು ಎಂದು ನಿಶ್ಚಯಿಸಿದ್ದೆ. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರನ್ನು ಸೋಲಿಸಿದ್ದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರದರ್ಶನ ನೀಡಲು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿತು.
ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನಿಖತ್.. ಇತಿಹಾಸ ಸೃಷ್ಟಿಸಿದ ಭಾರತೀಯ ಬಾಕ್ಸರ್