ಮೆಲ್ಬೋರ್ನ್: ಭಾರತ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿ ಬದುಕಿಗೆ 2022ರ ಆವೃತ್ತಿಯ ನಂತರ ತೆರೆ ಎಳೆಯುವುದಾಗಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಓಪನ್ನ ಮಹಿಳಾ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಉಕ್ರೇನ್ನ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಜೊತಯಾಗಿ ಆಸ್ಟ್ರೇಲಿಯಾ ಓಪನ್ನ ಮಹಿಳಾ ಡಬಲ್ಸ್ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ 4-6,6-7ರ ಅಂತರದಲ್ಲಿ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋಲು ಕಂಡಿದ್ದರು.
"ಈ ನನ್ನ ನಿರ್ಧಾರಕ್ಕೆ ಕೆಲವು ಕಾರಣಗಳಿವೆ. ಕೊರೊನಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನಾನು ಹೋಗಿ ಆಡಬಲ್ಲೆ ಎಂದು ಹೇಳುವುದು ಸುಲಭವಲ್ಲ. ನನ್ನ ಚೇತರಿಕೆ ತುಂಬಾ ಸಮಯ ತೆಗೆದುಕೊಳ್ಳಬಹುದು ಎಂದು ನಾನು ಭಾವಿಸಿದ್ದೇನೆ. ಅಲ್ಲದೆ ಈ ಕಠಿಣ ಸಂದರ್ಭದಲ್ಲಿ ನನ್ನ ಜೊತೆಗೆ 3 ವರ್ಷದ ಮಗನನ್ನು ಕರೆದುಕೊಂಡು ಹೋಗಿ, ಆತನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ ಎಂದೆನಿಸುತ್ತಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ".
"ಜೊತೆಗೆ ನನ್ನ ದೇಹವು ಕ್ಷೀಣಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ. ಆದರೆ ಅದರಿಂದಲೇ ನಾವು ಸೋತಿದ್ದೇವೆ ಎಂದು ನಾನು ಹೇಳುತ್ತಿಲ್ಲ, ಆದರೆ ನಾನು ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ" ಎಂದು ಮೆಲ್ಬೋರ್ನ್ ಪಾರ್ಕ್‌ನಲ್ಲಿ ಕೋರ್ಟ್ 5 ನಲ್ಲಿ ನಡೆದ ಸ್ಪರ್ಧೆಯ ನಂತರ ಮಿರ್ಜಾ ಹೇಳಿದ್ದಾರೆ.
ಡಬ್ಲ್ಯೂಟಿಎ ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ 30ರೊಳಗೆ ಸೇರಿದ ಭಾರತದ ಮೊದಲ ಪ್ಲೇಯರ್ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ ಈ ವರ್ಷದ ಎಲ್ಲಾ ಟೂರ್ನಮೆಂಟ್ಗಳನ್ನು ಆಡಿ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯಭ್ ಮಲಿಕ್ರನ್ನು ಮದುವೆಯಾಗಿದ್ದ ಸಾನಿಯಾ ಮಿರ್ಜಾ 2018 ಅಕ್ಟೋಬರ್ 30 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. 2017ರಲ್ಲಿ ಚೇನಾ ಓಪನ್ನಲ್ಲಿ ಕೊನೆಯಾದಾಗಿ ಟೆನ್ನಿಸ್ ಅಂಗಳದಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ, 2 ವರ್ಷಗಳ 2019ರಲ್ಲಿ ಹೋಬರ್ಟ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಇದೇ ನಾಡಿಯಾ ಕಿಚೆನೊಕ್ ಜೊತೆಯಾಗಿ ಕಣಕ್ಕಿಳಿದು ಪ್ರಶಸ್ತಿಯನ್ನು ಎತ್ತಿಹಿಡಿದಿದ್ದರು. ಈ ಮೂಲಕ ತಮ್ಮ ತಾಯಿಯಾದ ನಂತರ ಕ್ರೀಡಾ ಜೀವನ ಮುಕ್ತಾಯ ಎನ್ನುವ ಭಾವನೆಯಿದ್ದವರಿಗೆ ಪ್ರೇರಣೆಯಾಗಿದ್ದರು.
35 ವರ್ಷದ ಸಾನಿಯಾ ಮಿರ್ಜಾ ಡಬಲ್ಸ್ ವಿಭಾಗದಲ್ಲಿ ಮೂರು ಗ್ರ್ಯಾಂಡ್ಸ್ಲಾಮ್, ಮಿಕ್ಸಡ್ ಡಬಲ್ಸ್ನಲ್ಲಿ ಮೂರು ಗ್ರ್ಯಾಂಡ್ಸ್ಸ್ಲಾಮ್ ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿ:ಬ್ಯಾಡ್ಮಿಂಟನ್: ಅಂಡರ್-19 ಮಹಿಳಾ ಸಿಂಗಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಆಟಗಾರ್ತಿ ತಸ್ನೀಂ ಮೀರ್ ಸಂದರ್ಶನ