ಬೆಂಗಳೂರು: ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟ ಆಯೋಜಿಸುತ್ತಿರುವ ಉದ್ಘಾಟನಾ ಆವೃತ್ತಿಯ ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ 3X3 ಇಂದಿನಿಂದ ನಗರದಲ್ಲಿ ಆರಂಭವಾಗಲಿದೆ. ಮೊದಲ ಚರಣದ ಪಂದ್ಯಗಳು ಮಾರ್ಚ್ ಇಂದಿನಿಂದ ಮಾರ್ಚ್ 20ರವರೆಗೆ ನಗರದ ಕಂಠೀರವ ಕ್ರೀಡಾಂಗಣ ಹಾಗೂ ಬಳಿಕ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಒಟ್ಟಾರೆ ದೇಶದ 20 ನಗರಗಳಲ್ಲಿ ಟೂರ್ನಿ ಆಯೋಜನೆಗೊಂಡಿದೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟದ ಅಧ್ಯಕ್ಷ ಕೆ. ಗೋವಿಂದರಾಜ್ ಐಎನ್‌ಬಿಎಲ್ ಲೀಗ್ ಕುರಿತು ಮಾಹಿತಿ ನೀಡಿದರು. ಸಿಲಿಕಾನ್ ಸಿಟಿಯಲ್ಲಿ ಆರಂಭಗೊಳ್ಳುವ ಟೂರ್ನಿಯ ಫೈನಲ್ ಪಂದ್ಯಗಳು ಮೇ 27ರಿಂದ 29ರವರೆಗೆ ಬೆಂಗಳೂರಿನಲ್ಲೇ ನಡೆಯಲಿವೆ. ಆ ನಡುವಿನ ಪ್ರತಿ ವಾರಾಂತ್ಯದ ಮೂರು ದಿನಗಳು ದೇಶದ 20 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಪುರುಷರು, ಮಹಿಳೆಯರು, 18ರ ವಯೋಮಿತಿಯ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 4 ವಿಭಾಗಗಳಲ್ಲಿ ಟೂರ್ನಿ ನಡೆಯಲಿದೆ. ಪ್ರತಿ ನಗರದ ಚಾಂಪಿಯನ್‌ಗಳು ರಾಷ್ಟ್ರೀಯ ಫೈನಲ್ ಪಂದ್ಯದಲ್ಲಿ ಆಡಲು ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿದರು.
ನಗರ ವಿಭಾಗಗಳ ಚಾಂಪಿಯನ್ ತಂಡ 30 ಸಾವಿರ ರೂಪಾಯಿ, ರನ್ನರ್ ಅಪ್ ತಂಡ 20 ಸಾವಿರ ರೂ. ಹಾಗೂ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ 15 ಹಾಗೂ 10 ಸಾವಿರ ರೂ. ಬಹುಮಾನ ಪಡೆಯಲಿವೆ. ರಾಷ್ಟ್ರೀಯ ಚಾಂಪಿಯನ್ ತಂಡ ಅನುಕ್ರಮವಾಗಿ 1.5 ಲಕ್ಷ, 1 ಲಕ್ಷ, 75 ಸಾವಿರ ಹಾಗೂ 50 ಸಾವಿರ ರೂ. ಬಹುಮಾನ ಪಡೆಯಲಿವೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಬಿಎಫ್‌ಐ ಕಾರ್ಯದರ್ಶಿ ಚಂದರ್ ಮುಖಿ ಶರ್ಮ ಹಾಜರಿದ್ದರು.
ಐಎನ್‌ಬಿಎಲ್ 3X3 ಪಂದ್ಯಗಳ ವೇಳಾಪಟ್ಟಿ: ಮಾರ್ಚ್ 18ರಿಂದ 20ವರೆಗೆ ಬೆಂಗಳೂರು ಮತ್ತು ಕೋಲ್ಕತ್ತಾ, ಮಾರ್ಚ್ 25ರಿಂದ 27ರವೆಗೆ ಪುದುಚೆರಿ ಹಾಗೂ ಕಟಕ್, ಏಪ್ರಿಲ್ 3ರಿಂದ 10ವರೆಗೆ ಚೆನ್ನೈ, ಏಪ್ರಿಲ್ 15ರಿಂದ 17ರವರೆಗೆ ಭಾವ್‌ನಗರ್ ಹಾಗೂ ಲೂಧಿಯಾನ, ಏಪ್ರಿಲ್ 22ರಿಂದ 24ರವರೆಗೆ ಚಂಡೀಗಢ, ಚೆನ್ನೈ ಹಾಗೂ ಜೈಪುರ, ಏ. 29ರಿಂದ ಮೇ 1ರವರೆಗೆ ದಿಲ್ಲಿ, ಕೊಚ್ಚಿ, ಬಿಲೈ, ಮೇ 6ರಿಂದ 8ರವರೆಗೆ ಕಂಗ್ರಾ, ಇಂದೋರ್ ಹಾಗೂ ಗುವಾಹಟಿ, ಮೇ 13ರಿಂದ 15 ಮುಂಬಯಿ, ಲಖನೌ, ಐಜ್ವಾಲ್, ಮೇ 20ರಿಂದ 22ರವರೆಗೆ ಪಣಜಿ ಹಾಗೂ ಹೈದಾರಾಬಾದ್ ಹಾಗೂ ಮೇ 27ರಿಂದ 29ರವರೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಫೈನಲ್ಸ್ ನಡೆಯಲಿದೆ.
ಇದನ್ನೂ ಓದಿ: ಆಲ್ ಇಂಗ್ಲೆಂಡ್ ಓಪನ್: 3ನೇ ಶ್ರೇಯಾಂಕದ ಸ್ಪರ್ಧಿಯ ಮಣಿಸಿ ಕ್ವಾ.ಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್