ನವದೆಹಲಿ: ಅಲ್ಮಾಟಿಯಲ್ಲಿ ಗುರುವಾರ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಂಗೋಲಿಯನ್ ಕುಸ್ತಿಪಟು ಶುದೋರ್ ಬತರ್ಜಾವ್ ಅವರನ್ನು 10-7 ರಿಂದ ಮಣಿಸಿ ಭಾರತದ ಸರಿತಾ ಮೊರ್ ಏಷ್ಯನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಶುಡೋರ್ ಬಾತರ್ಜಾವಿನ್ ವಿರುದ್ಧವೇ ಫೈನಲ್‌ನಲ್ಲಿ ಗೆದ್ದು ಸ್ವರ್ಣ ಪದಕಕ್ಕೆ ಅವರು ಮುತ್ತಿಕ್ಕಿದರು. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ 1-7ರಲ್ಲಿ ಹಿನ್ನಡೆ ಅನುಭವಿಸಿದ್ದ ಸರಿತಾ, ಅದ್ಭುತ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ 10-7 ಅಂಕಗಳ ಅಂತರದಿಂದ ಗೆದ್ದು ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರು.
2020ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಸರಿತಾ ಇದೀಗ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಸೆಮಿಫೈನಲ್ನಲ್ಲಿ ಕಿರ್ಗಿಸ್ತಾನದ ನುರೈದಾ ಅನರ್ಕುಲೊವಾ ವಿರುದ್ಧ ಕೇವಲ 90 ಸೆಕೆಂಡ್ಗಳಲ್ಲೇ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿದ್ದರು.
"ಕಳೆದ ಎರಡು ದಿನಗಳಿಂದ ನಾನು ಅಸ್ವಸ್ಥಳಾಗಿದ್ದೆ. ಪಂದ್ಯಾರಂಭದಲ್ಲಿ ಜ್ವರದ ತಾಪ ಇನ್ನೂ ಇತ್ತು. ಆದರೆ ಕಳೆದ ಒಂದು ವರ್ಷದಲ್ಲಿ ನಾನು ಕಠಿಣ ಅಭ್ಯಾಸ ಮಾಡಿದ್ದರಿಂದ ಪುನರಾಗಮನ ಮಾಡುವ ವಿಶ್ವಾಸವಿತ್ತು.” ಎಂದು ಸರಿತಾ ತಿಳಿಸಿದರು.
ಇದನ್ನೂ ಓದಿ: ನಾವು ಈ ಪಂದ್ಯವನ್ನು ಕಳೆದುಕೊಳ್ಳುತ್ತೇವೆ ಎಂದುಕೊಂಡಿದ್ದೆ: ಸಂಜು ಸ್ಯಾಮ್ಸನ್
50 ಕೆ.ಜಿ ವಿಭಾಗದ ಪಂದ್ಯದಲ್ಲಿ ಸೀಮ ಬಿಸ್ಲಾ ತೈಪೆಯ ಯುಂಗ್ ಹ್ಸುನ್ ಲಿನ್ 10-0ಯಲ್ಲಿ ಮಣಿಸಿ ಕಂಚಿನ ಪದಕ ಪಡೆದರೆ, 76 ಕೆಜಿ ವಿಭಾಗದಲ್ಲಿ ಪೂಜಾ ಸಿಂಗ್ ಕೊರಿಯಾದ ಕುಸ್ತಿಪಟುವನ್ನು ಮಣಿಸಿ ಕಂಚು ಗೆದ್ದರು.